ರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ

ನವದೆಹಲಿ, ಜು. 5: ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭಾನುವಾರ ಬೆಳಿಗ್ಗೆ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳು, ಭಾರತ-ಚೀನಾ ಗಡಿ ಭಾಗದಲ್ಲಿ ಸೇನೆ ನಿಲುಗಡೆ ಇತ್ಯಾದಿಗಳ ಬಗ್ಗೆ ವಿವರಣೆ ನೀಡಿದ್ದಾರೆ. ಲಡಾಕ್‍ನ ನಿಮ್ಮೂನ್ ಬ್ರಿಗೇಡ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಅಲ್ಲಿನ ಯೋಧರನ್ನು ಮಾತನಾಡಿಸಿ ಮನೋಸ್ಥೈರ್ಯ ತುಂಬಿ, ಕಳೆದ ಜೂನ್ 15 ರಂದು ನಡೆದ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರ ಆರೋಗ್ಯ ವಿಚಾರಿಸಿ ಬಂದ ನಂತರ ರಾಷ್ಟ್ರಪತಿಗಳನ್ನು ಪ್ರಧಾನಿಗಳು ಭೇಟಿ ಮಾಡಿ ಹಲವು ವಿಷಯಗಳನ್ನು ತಿಳಿಸಿದ್ದಾರೆ. ಭಾರತ-ಚೀನಾ ಮಿಲಿಟರಿ ಕಮಾಂಡರ್‍ಗಳ ಮಟ್ಟದಲ್ಲಿ ಕಳೆದ 15 ರಂದು ನಡೆದ ಸಂಘರ್ಷದ ನಂತರ ಕೂಡ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ ಇದು ಫಲಪ್ರದವಾಗಿ ಚೀನಾ ಸೇನೆಯನ್ನು ಗಡಿಭಾಗದಿಂದ ಹಿಂಪಡೆದಿಲ್ಲ. ಸೇನೆಯನ್ನು ಹಿಂಪಡೆಯದೆ ಶಾಂತಿ ಮಾತುಕತೆಗೆ ಸಿದ್ಧವಿಲ್ಲ ಎಂದು ಭಾರತೀಯ ಸೇನೆ ಹಠ ಹಿಡಿದು ಕುಳಿತಿದೆ. ಮುಂದಿನ ದಿನಗಳಲ್ಲಿ ಒಂದು ವೇಳೆ ಯುದ್ಧ ಪರಿಸ್ಥಿತಿ ಒದಗಿಬಂದರೆ ಭಾರತೀಯ ವಾಯುಪಡೆ ಸರ್ವ ಸನ್ನದ್ಧವಾಗಿದೆ. ಚೀನಾದ ಗಡಿ ವಾಸ್ತವ ರೇಖೆಯ ಫಾರ್ವರ್ಡ್ ಬೇಸ್‍ನಲ್ಲಿ ಭಾರತೀಯ ವಾಯುಪಡೆ ಈಗಾಗಲೇ ವಾಯು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಗಡಿ ವಾಸ್ತವ ನಿಯಂತ್ರಣ ರೇಖೆ ಬಳಿ ವಾಯು ಕಾರ್ಯಾಚರಣೆ ನಡೆಸಲು ಸುಖೊಯ್ ಸು-30 ಎಂಕೆಐ, ಮಿಗ್-29 ಮತ್ತು ಯುದ್ಧ ಹೆಲಿಕಾಪ್ಟರ್‍ಗಳು ಹಾರಾಟ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಮಾಹಿತಿ ಸಿಕ್ಕಿದೆ.

10 ಸಾವಿರ ಹಾಸಿಗೆಗಳ ಕೇಂದ್ರ ಉದ್ಘಾಟನೆ

ನವದೆಹಲಿ, ಜು. 5: ಛತರ್ಪುರದ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್‍ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತೀದೊಡ್ಡ ಆರೈಕೆ ಕೇಂದ್ರ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರು ಭಾನುವಾರ ಉದ್ಘಾಟಿಸಿದರು. ಈ ಕೋವಿಡ್ ಆರೈಕೆ ಕೇಂದ್ರದಲ್ಲಿ ಒಟ್ಟು 10,000 ಹಾಸಿಗೆಗಳಿದ್ದು, ಲಕ್ಷಣ ರಹಿತ ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ಮನೆಯಲ್ಲಿ ಪ್ರತ್ಯೇಕ ವಾಸ ಮಾಡಲು ಸಾಧ್ಯವಾಗದಂತಹ ಲಕ್ಷಣ ರಹಿತ ಸೋಂಕಿತರಿಗೂ ಇಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಆರೈಕೆ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ- ಸರಿಸುಮಾರು 20 ಫುಟ್ಬಾಲ್ ಮೈದಾನಗಳಷ್ಟು ವಿಸ್ತಾರವಾಗಿದೆ. ಅಲ್ಲದೆ ಒಟ್ಟು 200 ಅಂಕಣಗಳನ್ನು ಒಳಗೊಂಡಿದ್ದು, ಇದರಲ್ಲಿ ತಲಾ 50 ಹಾಸಿಗೆಗಳನ್ನು ಹಾಕಲಾಗಿದೆ. ಇನ್ನು ದೆಹಲಿ ಸರ್ಕಾರವು ಆಡಲಿತಾತ್ಮಕ ಬೆಂಬಲವನ್ನು ನೀಡಿದರೆ, ಇಂಡೋ-ಟಿಬೆಟನ್ ಗಡಿ ಪೊಲೀಸ್ ಪಡೆ ಆರೈಕೆ ಕೇಂದ್ರದಲ್ಲಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ. ಕೇಂದ್ರದ ಕಾರ್ಯಗಳಲ್ಲಿ ರಾಧಾ ಸ್ವಾಮಿ ಸತ್ಸಂಗ್‍ನ ಸ್ವಯಂ ಸೇವಕರು ಕೂಡ ಕೈಜೋಡಿಸಲಿದ್ದಾರೆಂದು ತಿಳಿದುಬಂದಿದೆ.

ಗುಡ್ಡ ಕುಸಿದು ಮಕ್ಕಳ ಸಾವು

ಮಂಗಳೂರು, ಜು. 5: ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡ ಕುಸಿತ ದುರಂತದಲ್ಲಿ ಇಬ್ಬರು ಮಕ್ಕಳು ದುರ್ಮರಣ ಹೊಂದಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ 30 ಅಡಿ ಕೆಳಕ್ಕೆ ಗುಡ್ಡ ಕುಸಿದಿತ್ತು. ಈ ವೇಳೆಯಲ್ಲಿ ಅಲ್ಲಿ ನಾಲ್ಕು ಮನೆಗಳು ನೆಲಸಮಗೊಂಡಿದ್ದವು. ದೊಡ್ಡವರು ಮನೆಯಿಂದ ಹೊರ ಓಡಿ ಬಂದಿದ್ದರು. ಆದರೆ 16 ವರ್ಷದ ಸಫ್ವಾನ್ ಹಾಗೂ 10 ವರ್ಷದ ಸಹಲಾ ಇಬ್ಬರೂ ಮಣ್ಣಿನಡಿ ಸಿಲುಕಿದ್ದರು. ಈ ವೇಳೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ನಿರಂತರವಾಗಿ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಇಬ್ಬರ ದೇಹ ಪತ್ತೆಯಾಗಿತ್ತು. ಆದರೆ ಅದಾಗಲೇ ಅವರಿಬ್ಬರೂ ಮೃತಪಟ್ಟಿದ್ದರು.

ಅವಧಿಯಾದರೂ ಸೇನೆಯಲ್ಲಿದ್ದ ಯೋಧ ಸಾವು

ಹಾಸನ, ಜು. 5: ಅರುಣಾಚಲದಲ್ಲಿ ಜಿಲ್ಲೆಯ ಯೋಧರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. 38 ವರ್ಷದ ಹವಾಲ್ದಾರ ಮಲ್ಲೇಶ್ ಮೃತ ಯೋಧನಾಗಿದ್ದು, ಇವರು ಅರಕಲಗೂಡು ತಾಲೂಕು ಕಸಬಾ ಹೋಬಳಿಯ ಅಥಣಿ ಸಿದ್ದಾಪುರ ಗ್ರಾಮದ ಮಂಜೇಗೌಡ ಅವರ ಪುತ್ರÀ. ಮಲ್ಲೇಶ್ ಅವರ ಕರ್ತವ್ಯದ ಅವಧಿ ಕೊನೆಗೊಂಡಿದ್ದರೂ ದೇಶ ಸೇವೆ ಮಾಡುವ ಹಂಬಲದಿಂದ ಮತ್ತೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಡಿ ಭಾಗಕ್ಕೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಪೆಟ್ರೋಲ್ ಬಂಕರ್ ವಾಹನದ ಮೇಲೆ ಗುಡ್ಡ ಕುಸಿದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಲ್ಲೇಶ್ ಅವರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಲ್ಲೇಶ್ ಮತಪಟ್ಟಿದ್ದಾರೆ.

ಜನಾರ್ಧನ ಪೂಜಾರಿಗೆ ಸೋಂಕು

ಮಂಗಳೂರು, ಜು. 5: ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ಜನಾರ್ಧನ ಪೂಜಾರಿಯವರಿಗೆ ಕೋವಿಡ್ ತಪಾಸಣೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಅಲ್ಲದೇ ಅವರ ಪತ್ನಿಗೂ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜನಾರ್ಧನ ಪೂಜಾರಿ ಅವರ ಹಿರಿಯ ಪುತ್ರ ಸಂತೋಷ್ ಜೆ. ಪೂಜಾರಿ ಅವರು ಮಾಹಿತಿ ನೀಡಿದ್ದು, ಜನಾರ್ಧನ ಪೂಜಾರಿ ಅವರಿಗೆ ಸೋಂಕು ಸಂಬಂಧಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೆ ವರದಿ ಪಾಸಿಟಿವ್ ಬಂದಿದೆ. ಅವರು ಆರೋಗ್ಯವಾಗಿದ್ದು, ದಯವಿಟ್ಟು ಯಾರೂ ಈ ಬಗ್ಗೆ ಆತಂಕಪಡುವ ಪಡುವ ಅಗತ್ಯವಿಲ್ಲ, ಶೀಘ್ರದಲ್ಲೇ ಅವರು ಸಂಪೂರ್ಣ ಗುಣಮುಖರಾಗಲು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ. ಮಾಜಿ ಸಚಿವರು ಹಾಗೂ ಅವರ ಪತ್ನಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರಾದ ಉಗ್ರರಲ್ಲಿ ಸೋಂಕು ಪತ್ತೆ

ಕುಲ್ಗಾಮ್, ಜು. 5: ಜಮ್ಮು-ಕಾಶ್ಮೀರದ ಕಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳ ಜೊತೆಗಿನ ಎನ್‍ಕೌಂಟರ್‍ನಲ್ಲಿ ಮೃತರಾದ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ವೈದ್ಯಕೀಯ ಕಾನೂನು ಶಿಷ್ಟಾಚಾರದಂತೆ ಇಬ್ಬರು ಉಗ್ರರ ಮಾದರಿಗಳನ್ನು ಸಂಗ್ರಹಿಸಿ ಕೋವಿಡ್-19 ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಲ್ಗಾಮ್‍ನ ಅರ್ರಾ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಉಗ್ರರು ಮೃತಪಟ್ಟಿದ್ದರು. ಗುಂಡಿನ ಕಾಳಗದ ವೇಳೆಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಗಾಯಗೊಂಡಿದ್ದರು. ಕೋವಿಡ್-19 ಶಿಷ್ಟಾಚಾರದಂತೆ ಸೂಕ್ತ ರೀತಿಯಲ್ಲಿ ಮೃತರ ಮೃತದೇಹಗಳನ್ನು ಬಾರಮುಲ್ಲಾ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಎನ್‍ಕೌಂಟರ್‍ನಲ್ಲಿ ನಕ್ಸಲರ ಸಾವು

ಭುವನೇಶ್ವರ, ಜು. 5: ಒಡಿಶಾದಲ್ಲಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ಭೀಕರ ಎನ್‍ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ. ಒಡಿಶಾದ ಕಂದಮಾಲ್ ಜಿಲ್ಲೆಯ ಸಿರ್ಲಾ ಅರಣ್ಯದಲ್ಲಿ ಇಂದು ಬೆಳಿಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಜಿಎನ್ ವಿಭಾಗಕ್ಕೆ ಸೇರಿದ ಮತ್ತು ಪೊಲೀಸರಿಗೆ ಬೇಕಾಗಿದ್ದ ನಾಲ್ವರು ಕುಖ್ಯಾತ ನಕ್ಸಲರು ಹತರಾಗಿದ್ದಾರೆ.