ಕಣಿವೆ, ಜು. 5: ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ವಾರಿಯರ್ಸ್ಗಳಾಗಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರಿಗೆ ಪಂಚಾಯಿತಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಮನೆ ಮನೆಗಳಿಗೆ ಖುದ್ದು ತೆರಳಿ ಆರೋಗ್ಯ ಸೇವೆಯ ಜೊತೆಗೆ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಸಫಲರಾಗಿರುವ ಐವರು ಆಶಾ ಕಾರ್ಯಕರ್ತೆಯರು ಮತ್ತು ಮೂವರು ಶುಶ್ರೂಷÀಕಿಯರ ಸೇವೆ ಶ್ಲಾಘನೀಯವಾದುದು. ಗಡಿಯಲ್ಲಿ ಸೇವೆ ಮಾಡುವ ಯೋಧರ ಮಾದರಿಯಲ್ಲಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸಿರುವ ಆರೋಗ್ಯ ಕಾರ್ಯಕರ್ತೆಯರಿಂದಾಗಿ ಜನ ನೆಮ್ಮದಿಯಲ್ಲಿ ಇರುವ ವಾತಾವರಣ ನಿರ್ಮಾಣವಾಗಿದೆ ಎಂದು ಪಿಡಿಓ ಲೋಕೇಶ್ ಶ್ಲಾಘಿಸಿದರು.
ಈ ಸಂದರ್ಭ ಪಂಚಾಯಿತಿ ಆಡಳಿತ ಮಂಡಳಿ ಅಧ್ಯಕ್ಷೆ ಪಿ. ಸುಮ, ಉಪಾಧ್ಯಕ್ಷೆ ಕುಸುಮಾವತಿ ಸೇರಿದಂತೆ ಎಲ್ಲಾ ಸದಸ್ಯರಿಗೂ ಅವರ ಸೇವೆಯನ್ನು ಸ್ಮರಿಸಿ ಸ್ಮರಣಿಕೆ ನೀಡಲಾಯಿತು. ಇದೇ ವೇಳೆ ಆಶಾ ಕಾರ್ಯಕರ್ತೆಯರಾದ ಚಿತ್ರಾ, ಪ್ರೇಮ, ಉಷಾ, ರಾಣಿ, ರೂಪ, ಶುಶ್ರೂಷಕಿಯರಾದ ಗ್ರೀಷ್ಮ್ಮ, ಸುಶೀಲ ಹಾಗೂ ಯೋಗಿಣಿ ಅವರನ್ನು ಪಂಚಾಯಿತಿ ವತಿಯಿಂದ ಗೌರವಿಸಲಾಯಿತು.