ಕೊರೊನಾ ನಿಯಮದಂತೆ ಅಂತ್ಯಸಂಸ್ಕಾರ ಮಡಿಕೇರಿ, ಜು. 5: ಕುಶಾಲನಗರದಿಂದ ತೀವ್ರ ಅಸ್ವಸ್ಥಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆಯಲ್ಲೆ ನಿಧನರಾದರು. ಬೆಂಗಳೂರಿನಿಂದ ಕುಶಾಲನಗರದ ದಂಡಿನಪೇಟೆಯ ಸಹೋದರನ ಮನೆಗೆ ಬಂದಿದ್ದ ಮುಸ್ಲಿಂ ಪುರುಷರೊಬ್ಬರು ನಿನ್ನೆ ಸಂಜೆ ತೀವ್ರ ಉಸಿರಾಟದ ತೊಂದರೆಯಿಂದ ಮಡಿಕೇರಿಯ ಆಸ್ಪತ್ರೆಗೆ ಆಗಮಿಸಿದ್ದರು. ಕೋವಿಡ್ ಪರೀಕ್ಷೆ ಸೇರಿದಂತೆ ಇತರ ಚಿಕಿತ್ಸೆಗಳನ್ನು ನೀಡುವ ಹಂತದಲ್ಲೆ ದುರ್ದೈವಿ ವಿಧಿವಶರಾದರು. ಮಡಿಕೇರಿಯ ಪ್ರಯೋಗಾಲಯ ಕಾರ್ಯನಿರ್ವಹಿಸದ ಕಾರಣ ಕೊರೊನಾ ರೋಗದ ಕುರಿತು ಯಾವದೇ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ.ಈ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆ ಕೊರೊನಾ ಫಲಿತಾಂಶ ಲಭ್ಯವಾಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೇ ಮಡಿಕೇರಿಯಲ್ಲಿಯೇ ಅಂತ್ಯಸಂಸ್ಕಾರ ನಡೆಸಬೇಕಾದ ಬಗ್ಗೆ ಅಧಿಕಾರಿಗಳು ಹಲವರೊಂದಿಗೆ ಚರ್ಚಿಸಿದರು. ಈ ಸಂದರ್ಭ ಜಾಮಿಯಾ ಮಸೀದಿಗೆ ಸೇರಿದ ಈದ್ಗಾ ಮೈದಾನ ಒಂದು ಮೂಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸುವದಾಗಿ ಆಡಳಿತ ಮಂಡಳಿ ಭರವಸೆ ನೀಡಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಕೊರೊನಾ ಶವಸಂಸ್ಕಾರದ ನಿಯಮಾನುಸಾರ ಅಧಿಕಾರಿಗಳು ಹಾಗೂ ಪೌರಕಾರ್ಮಿಕ ಸಹಕಾರದೊಂದಿಗೆ ಆ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ವಯಂ ಸೇವಕ ಯುವಕರು ಶವ ಸಂಸ್ಕಾರದ ಸಂದರ್ಭ ನೆರವಾದರು. ಮೃತ ವ್ಯಕ್ತಿಯ ಕೊರೊನಾ ಪರೀಕ್ಷೆ ಫಲಿತಾಂಶ ಇನ್ನಷ್ಟೆ ಲಭ್ಯವಾಗಬೇಕಿದೆ.