ಮಡಿಕೇರಿ, ಜು. 3 : ಕೊರೊನಾ ಸೋಂಕಿನಿಂದಾಗಿ ಕೊಡಗಿನಲ್ಲಿ ಸೀಲ್‍ಡೌನ್ ಆದ ಪ್ರದೇಶದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಸರ್ಕಾರದಿಂದಲೇ ಪಡಿತರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಜಾತ್ಯಾತೀತ ಜನತಾ ದಳದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಸುಮಾರು 24 ಪ್ರದೇಶಗಳು ಸೀಲ್‍ಡೌನ್ ಆಗಿದೆ. ಇನ್ನು ಹೆಚ್ಚು ಪ್ರದೇಶಗಳು ಸೀಲ್ ಡೌನ್ ಆಗುವ ಸಂಭವ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಸೀಲ್‍ಡೌನ್ ಆಗಿರುವ ಪ್ರದೇಶದಲ್ಲಿ ದಿನನಿತ್ಯದ ದಿನಸಿ ಸಾಮಗ್ರಿಗಳು ಇಲ್ಲದೇ ಜನರ ಬಳಿ ಹಣವೂ ಇಲ್ಲದೇ ಉಪವಾಸದಿಂದ ಮಲಗುವ ಪರಿಸ್ಥಿತಿ ಬಂದೊದಗಿದೆ.

ಆದ್ದರಿಂದ ರಾಜ್ಯ ಸರ್ಕಾರ ಜಿಲ್ಲಾಡಳಿತ ಮೂಲಕ ಕಂಟೈನ್ಮೆಂಟ್ ವಲಯಗಳಿಗೆ ದಿನನಿತ್ಯದ ಸಾಮಗ್ರಿಗಳನ್ನು ವಿತರಿಸಬೇಕು, ಹೊರಜಿಲ್ಲೆಯಿಂದ ಬರುವ ಜನರನ್ನು ಕೊಡಗು ಜಿಲ್ಲಾ ಚೆಕ್‍ಪೋಸ್ಟ್ ಬಳಿ ಮುಂದಿನ ಸೆಪ್ಟೆಂಬರ್‍ವರೆಗೆ ಪರೀಕ್ಷಿಸಿ ಬಿಡಬೇಕು, ಕೊಡಗಿನಲ್ಲಿ ಈಗಾಗಲೇ ಮಾನ್ಸೂನ್ ಪ್ರಾರಂಭವಾಗಿದ್ದು, ಮಳೆ, ಚಳಿ ಹೆಚ್ಚಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮುಂಜಾಗೃತ ಕ್ರಮ ವಹಿಸಬೇಕು ಎಂದು ಗಣೇಶ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಸ್ಸೂರ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಖ್ ಖಾನ್, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಎ.ಜಿ. ವಿಜಯ್, ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಸುನೀಲ್, ಹನೀಫ್, ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಜಾಸೀರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಗಣೇಶ್, ಜಿಲ್ಲಾ ಉಪಾಧ್ಯಕ್ಷ ಶಬೀರ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಸಿ.ಎಸ್. ನಾಗರಾಜ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ಮಡಿಕೇರಿ ಯುವ ಘಟಕದ ಅಧ್ಯಕ್ಷ ರವಿ ಕಿರಣ್, ಕಾರ್ಯದರ್ಶಿ ಅಜೀತ್, ಸಾಮಾಜಿಕ ಜಾಲತಾಣದ ಸಂಚಾಲಕ ಎಂ.ಎಸ್. ಸೈಫ್ ಆಲಿ, ಮಡಿಕೇರಿ ನಗರ ಎಸ್.ಸಿ. ಘಟಕದ ಅಧ್ಯಕ್ಷ ರವಿ ಕುಮಾರ್, ಮಡಿಕೇರಿ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಲ್ ಬಾದ್‍ಷ, ಜಿಲ್ಲಾ ಮುಖಂಡರಾದ ರುದ್ರೇಶ್, ಅಶ್ರಫ್, ಶಿವದಾಸ್, ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಮಡಿಕೇರಿ ನಗರ ಮಹಿಳಾ ಅಧ್ಯಕ್ಷೆ ಸುನಂದಾ ಪಾಲ್ಗೊಂಡಿದ್ದರು.