ಭಾರತಕ್ಕೆ ಬೆಂಬಲ ಸೂಚಿಸಿದ ಜಪಾನ್

ಟೋಕಿಯೋ, ಜು. 3: ಪೂರ್ವ ಲಡಾಖ್‍ನಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಭಾರತಕ್ಕೆ ಗರಿಷ್ಠ ಬೆಂಬಲ ಸೂಚಿಸಿರುವ ಜಪಾನ್ ಈ ಪ್ರದೇಶದಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಏಕಪಕ್ಷೀಯ ಪ್ರಯತ್ನಕ್ಕೆ ತನ್ನ ಪ್ರಬಲ ವಿರೋಧವಿದೆ ಎಂದು ಹೇಳಿದೆ. ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀರಂಗ ಅವರೊಂದಿಗಿನ ಸಭೆಯ ನಂತರ, ಜಪಾನ್ ರಾಯಭಾರಿ ಸತೋಶಿ ಸುಜುಕಿ ಮಾತನಾಡಿ, ಮಾತುಕತೆಯ ಮೂಲಕ ವಿವಾದವು ಶಾಂತಿಯುತವಾಗಿ ಬಗೆಹರಿಯಲಿದೆ ಎಂದು ಜಪಾನ್ ಆಶಿಸುತ್ತದೆ ಎಂದಿದ್ದಾರೆ. ವಿದೇಶಾಂಗ ಕಾರ್ಯದರ್ಶಿಗಳೊಂದಿಗಿನ ಉನ್ನತ ಮಟ್ಟದ ಫಲಪ್ರದ ಮಾತುಕತೆ ಬಳಿಕ ಭಾರತ ಸರ್ಕಾರ ಎಲ್‍ಎಸಿ ಸಂಘರ್ಷದ ನಂತರ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಅಲ್ಲದೆ ಎರಡೂ ರಾಷ್ಟ್ರಗಳ ನಡುವೆ ಮಾತುಕತೆಯ ಮೂಲಕ ವಿವಾದವು ಕೊನೆಗಾಣಲಿದೆ ಎಂದು ನಮ್ಮ ರಾಷ್ಟ್ರ ಆಶಿಸುತ್ತದೆ ಜಪಾನ್ ರಾಯಭಾರಿ ಟ್ವೀಟ್ ಮಾಡಿದ್ದಾರೆ. ಕಳೆದ ಏಳು ವಾರಗಳಿಂದ ಪೂರ್ವ ಮತ್ತು ಲಡಾಕ್‍ನ ಅನೇಕ ಸ್ಥಳಗಳಲ್ಲಿ ಭಾರತೀಯ ಮತ್ತು ಚೀನೀ ಸೈನ್ಯಗಳು ಪರಸ್ಪರ ಕಾದಾಟದಂತ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿದೆ. ಜೂನ್ 15 ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಈ ಬೆಳವಣಿಗೆಗೆ ತೀವ್ರ ಸ್ವರೂಪ ಸಿಕ್ಕಿತ್ತು.

ದೇಶಕ್ಕೆ ಸಂದೇಶ ರವಾನಿಸಿದ ಪರೀಕ್ಷೆ

ಬೆಂಗಳೂರು, ಜು. 3: ಇಡೀ ದೇಶದ ಗಮನ ಸೆಳೆದಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಕೊರೊನಾ ಸೋಂಕಿನ ನಡುವೆಯೂ ಬಹುತೇಕ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಂಕು ನಿಯಂತ್ರಣ ಕ್ರಮಗಳ ನಡುವೆ ಪರೀಕ್ಷೆ ಬರೆದಿದ್ದಾರೆ. ಶನಿವಾರ ಕೊನೆಯ ಪರೀಕ್ಷೆ ಇದ್ದು, ಈವರೆಗೆ ನಿರಾತಂಕವಾಗಿ ಪರೀಕ್ಷೆ ನಡೆದಿದೆ. ಈ ಮೂಲಕ ಇಡೀ ದೇಶಕ್ಕೆ ರಾಜ್ಯ ಸರ್ಕಾರ ಸಂದೇಶ ರವಾನಿಸಿದೆ. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೇ ಹಲವು ದಿನ ಚರ್ಚೆ ನಡೆದಿತ್ತು. ಅನೇಕ ಭಿನ್ನಾಭಿಪ್ರಾಯಗಳ ನಡುವೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಪರೀಕ್ಷೆ ಸುಗಮವಾಗಿ ನಡೆಯಲು ಹಲವು ಇಲಾಖೆಗಳ ಹೆಚ್ಚುವರಿ ಸಿಬ್ಬಂದಿಯ ನೆರವು ಪಡೆದು ಚುನಾವಣೆ ಸಂದರ್ಭದಲ್ಲಿ ವಹಿಸುವಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾಸ್ಕ್, ಸ್ಯಾನಿಟೈಸರ್ ನೀಡುವ ಮೂಲಕ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿತ್ತು. ಕೊರೊನಾ ಸೋಂಕಿನ ಹಿನ್ನೆಲೆ ಅತ್ಯಂತ ಎಚ್ಚರಿಕೆ ವಹಿಸುತ್ತಿರುವ ಕುರಿತು ಪ್ರತಿಯೊಬ್ಬ ಪೋಷಕರಿಗೂ ಭರವಸೆ ನೀಡಲಾಗಿತ್ತು. ಕೊರೊನಾ ಸೋಂಕಿನಿಂದ ಈಗ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವಾಗ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳಿಗೆ ಮೊದಲ ಪ್ರಯತ್ನ ಎಂದೇ ಪ್ರಮಾಣ ಪತ್ರದಲ್ಲಿ ನಮೂದಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲ ಸಂತಸ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರ ಬಗ್ಗೆ ಶ್ಲಾಘನೆ

ನವದೆಹಲಿ, ಜು. 3: ಕೋವಿಡ್-19 ಎದುರಿಸುವಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರು ಪ್ರಮುಖ ಆಧಾರ ಸ್ತಂಭವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮುಕ್ತ ಕಂಠದಿಂದ ಶ್ಲಾಘಿಸಿದೆ. ಸೋಂಕಿನ ಲಕ್ಷಣ ಪತ್ತೆಗಾಗಿ ಮನೆ ಮನೆ ಸರ್ವೇ ಕಾರ್ಯ ಹಾಗೂ ಅಂತರ ರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಇತರ ಸಮುದಾಯದ ತಪಾಸಣೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದ್ದು, ಅವರ ಸೇವೆಯನ್ನು ಪ್ರಶಂಶಿಸಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ತೊಡಗಿಸಿಕೊಳ್ಳುವ ಮೂಲಕ ರಾಜ್ಯದ ಪ್ರಮುಖ ಆಧಾರ ಸ್ತಂಭವಾಗಿ ಹೊರ ಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಒಂದು ಬಾರಿ ಸರ್ವೆಯಲ್ಲಿ ಸುಮಾರು 1.59 ಕೋಟಿ ನಿವಾಸಿಗಳನ್ನು ಸರ್ವೆ ನಡೆಸಲಾಗಿದ್ದು, ರೋಗ ನಿರೋಧಕ ಶಕ್ತಿ ಇಲ್ಲದವರು, ವೃದ್ಧರನ್ನು ಪತ್ತೆ ಹಚ್ಚಿದ್ದಾರೆ. ಕಂಟೈನ್‍ಮೆಂಟ್ ವಲಯಗಳಲ್ಲಿ ಒಂದು ಬಾರಿ ಹಾಗೂ ಇತರ ಪ್ರದೇಶಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಭೇಟಿ ನೀಡುವ ಮೂಲಕ ತೊಂದರೆಯಲ್ಲಿರುವ ಜನರ ಬಗ್ಗೆ ಪ್ರತಿನಿತ್ಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಹತ್ಯೆಗೆ ಕಾರಣ ಹೇಳಿದ ಚಾರ್ಜ್ ಶೀಟ್

ನವದೆಹಲಿ, ಜು. 3: ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆ ವೇಳೆ 9 ಮುಸ್ಲಿಮರನ್ನು ಜೈಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಕೆಲವರು ವಾಟ್ಸ್‍ಆಪ್ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ಕೋರ್ಟ್‍ಗೆ ಸಲ್ಲಿಸಿರುವ ಚಾರ್ಜ್ ಶೀಟ್‍ನಲ್ಲಿ ಹೇಳಿದ್ದಾರೆ. ಹತ್ಯೆ ಪ್ರಕರಣದ ಆರೋಪಿಗಳು, ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಫೆ. 25 ರಂದು ಸೃಷ್ಟಿಯಾದ ಕಟ್ಟರ್ ಹಿಂದೂ ಏಕತಾ ಎಂಬ ವಾಟ್ಸ್‍ಆಪ್‍ನ ಗ್ರೂಪ್‍ನ ಭಾಗವಾಗಿದ್ದರು ಎಂದು ಪೊಲೀಸರು ಹೇಳಿದ್ದು, ಈ ವಾಟ್ಸ್‍ಆಪ್ ಗ್ರೂಪ್ ಮೂಲಕ ಜನರನ್ನು ಸೇರಿಸುವುದು, ಮಾರಕಾಸ್ತ್ರಗಳ ವ್ಯವಸ್ಥೆ ಮಾಡುವುದನ್ನು ಮಾಡುತ್ತಿದ್ದರು ಎಂದು ಚಾರ್ಜ್ ಶೀಟ್‍ನಲ್ಲಿ ತಿಳಿಸಿದ್ದಾರೆ. ಈ ವಾಟ್ಸ್‍ಆಪ್ ಗ್ರೂಪ್‍ನ ಸೃಷ್ಟಿಸಿದ ವ್ಯಕ್ತಿ ಈಗಲೂ ಕಾಣೆಯಾಗಿದ್ದು, ಪ್ರಾರಂಭದಲ್ಲಿ 125 ಜನರಿದ್ದ ಗ್ರೂಪ್‍ನಲ್ಲಿ ಮಾರ್ಚ್ 8 ರ ವೇಳೆಗೆ 47 ಜನರು ಎಕ್ಸಿಟ್ ಆಗಿದ್ದರು ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಗೌತಮ್‍ಗೆ ಸಲ್ಲಿಸಿರುವ ಚಾರ್ಜ್ ಶೀಟ್‍ನಲ್ಲಿ ತಿಳಿಸಿದ್ದಾರೆ.

ಸದ್ಯಕ್ಕೆ ವಿಮಾನ ಸೇವೆ ಇಲ್ಲ

ನವದೆಹಲಿ, ಜು. 3: ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆ ಕಳೆದ ಮೂರು ತಿಂಗಳಿಂದ ಅಂತರರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದೀಗ ಅದನ್ನು ತಾ. 31 ರವರೆಗೆ ವಿಸ್ತರಿಸಲಾಗಿದೆ. ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತಾ. 31 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಈ ನಿರ್ಬಂಧವೂ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಮಾರ್ಚ್ 25 ರಂದು ಕೊರೊನಾ ವೈರಸ್ ನಿಯಂತ್ರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ ನಂತರ ಎಲ್ಲಾ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಮೇ 25 ರಿಂದ ದೇಶಿಯ ವಿಮಾನ ಹಾರಾಟ ಆರಂಭವಾಗಿದೆ. ಆದರೆ ಅಂತರರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಮುಂದುವರೆಸಲಾಗಿದೆ.

ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ

ಬೆಂಗಳೂರು, ಜು. 3: ಕೊರೊನಾ ಸಂಕಟದಲ್ಲಿಯೂ ರಾಜ್ಯ ಸರ್ಕಾರ ಹಣ ಲೂಟಿ ಹೊಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನೆಪದಲ್ಲಿ ಸರ್ಕಾರ ಲೂಟಿ ಮಾಡಿದ್ದು, 3,328 ಕೋಟಿ ಹಣ ಕೊರೊನಾಗೆ ಖರ್ಚು ಮಾಡಿದ್ದಾರೆ. ಆದರೆ 815 ಕೋಟಿಗೆ ಲೆಕ್ಕ ಸಲ್ಲಿಸಿಲ್ಲ. ಹೆಚ್ಚಿನ ಹಣ ನೀಡಿ ಕಿಟ್ ಉಪಕರಣ ಖರೀದಿ ಮಾಡಿದ್ದಕ್ಕೆ ಸರ್ಕಾರಕ್ಕೆ ಹಣಕಾಸು ಇಲಾಖೆ ಲೆಕ್ಕ ಕೇಳಿದೆ. ಸಾನಿಟೈಜರ್, ಪಿಪಿಇ ಕಿಟ್, ಥರ್ಮಲ್ ಸ್ಯ್ಕಾನರ್‍ನಲ್ಲಿ ಎರಡು ಪಟ್ಟು ಹಣ ನೀಡಿ ಖರೀದಿ ಮಾಡಿದ್ದಾರೆ ಎಂದರು. ಕೇಂದ್ರ ಹಾಗೂ ರಾಜ್ಯಗಳು ಸರಿಯಾದ ಸಿದ್ಧತೆ, ಕೊರೊನಾ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಹಾಸಿಗೆ ಲಭ್ಯವಿರುವುದಾಗಿ ಸರ್ಕಾರ ಹೇಳುತ್ತದೆ. ಆದರೆ ಖಾಸಗಿಯವರು ಸರ್ಕಾರದ ಮಾತನ್ನು ಕೇಳುತ್ತಿಲ್ಲ.