ಮಡಿಕೇರಿ ಜು.3 : ಜಿಲ್ಲೆಯ ಬಿಜೆಪಿ ಪ್ರಮುಖರು ಯಾವುದೇ ಆಧಾರವಿಲ್ಲದೆ ಕ್ಷುಲ್ಲಕ ಕಾರಣವನ್ನು ನೆಪಮಾಡಿಕೊಂಡು ಕಾಂಗ್ರೆಸ್‍ನ ವಿ.ಪಿ.ಶಶಿಧರ್ ಅವರ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಕೊಡಗಿನ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿ ಎಂದು ಜಿ.ಪಂ ಸದಸ್ಯರು ಹಾಗೂ ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಅವರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳದಿರುವುದೇ ಈ ಪ್ರಮಾದಗಳಿಗೆ ಕಾರಣವೆಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ವಿ.ಪಿ.ಶಶಿಧರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಡಿವೈಎಸ್‍ಪಿ, ವೃತ್ತ ನಿರೀಕ್ಷಕರು ಹಾಗೂ ಕುಶಾಲನಗರದ ಠಾಣಾಧಿಕಾರಿಗಳು ಪ್ರತ್ಯಕ್ಷದರ್ಶಿಗಳಾಗಿ ಸತ್ಯ ಏನೆಂದು ತಿಳಿದಿದ್ದಾರೆ. ಪೊಲೀಸ್ ಅಧಿಕಾರಿಗಳು ದೇಶದ ಕಾನೂನಿನ ಮುಂದೆ ಸಾಮಾನ್ಯ ಮಹಿಳೆಯು ಒಂದೇ, ಸೋನಿಯಾ ಗಾಂಧಿ ಅವರು ಒಂದೇ ಎಂದು ಬೆದರಿಸುವ ದಾಟಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿ.ಪಿ.ಶಶಿಧರ್ ಅವರು ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿಗಳನ್ನು ಯಾರಾದರೂ ನಿಂದಿಸಿದರೆ ಪೊಲೀಸ್ ಅಧಿಕಾರಿಗಳಾದ ನೀವುಗಳು ಇದೇ ರೀತಿಯಾದ ನಿರ್ಲಕ್ಷ್ಯ ಮನೋಭಾವನೆ ತೋರುವಿರ ಎಂದು ಪ್ರಶ್ನಿಸಿದ್ದಾರೆಯೇ ಹೊರತು ಉದ್ದೇಶ ಪೂರ್ವಕವಾಗಿ ಪ್ರಧಾನಿ ಅವರ ಬಗ್ಗೆ ಮಾತನಾಡಿಲ್ಲವೆಂದು ಚಂದ್ರಕಲಾ ಸಮರ್ಥಿಸಿಕೊಂಡರು.

ಮೋದಿ ವ್ಯಕ್ತಿಯಲ್ಲ ಶಕ್ತಿ : ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, ಒಬ್ಬ ವ್ಯಕ್ತಿ ಮಾತ್ರವಲ್ಲ ಶಕ್ತಿ ಕೂಡ ಹೌದು ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಡೀ ದೇಶವೇ ಮೋದಿ ಅವರನ್ನು ಪ್ರೀತಿಯಿಂದ ಕಾಣುತ್ತಿರುವಾಗ ನಾವು ಕೂಡ ಅವರನ್ನು ಗೌರವಿಸುತ್ತೇವೆ. ಕೆಟ್ಟ ಭಾಷೆಯನ್ನು ಬಳಸಿ ಇನ್ನೊಬ್ಬರನ್ನು ನಿಂದಿಸುವ ಸಂಸ್ಕøತಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಆದರೆ ಬಿಜೆಪಿ ಮಂದಿ ಉತ್ತಮ ವ್ಯಕ್ತಿತ್ವದ ನರೇಂದ್ರಮೋದಿ ಅವರ ಹೆಸರು ಹೇಳಿಕೊಂಡು ಅನ್ಯಾಯ ಮಾಡುತ್ತಿದ್ದಾರೆ ಎಂದು ಚಂದ್ರಕಲಾ ಟೀಕಿಸಿದರು.

ಜಿಲ್ಲೆಯಲ್ಲಿ ಬಿಜೆಪಿಯವರಿಗೊಂದು ನ್ಯಾಯ, ಕಾಂಗ್ರೆಸ್ಸಿಗರಿಗೊಂದು ನ್ಯಾಯ ಎನ್ನುವ ವ್ಯವಸ್ಥೆ ಜಾರಿಯಲ್ಲಿದೆ. ಬಡವರ ಹೋಂಸ್ಟೇಗಳನ್ನು ಬಂದ್ ಮಾಡಿಸಿದ ಶಾಸಕರು ಇಂದಿಗೂ ಕಾರ್ಯನಿರ್ವಹಿಸುತ್ತಿರುವ ರೆಸಾರ್ಟ್‍ಗಳ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಫಿಲೋಮಿನಾ ಉಪಸ್ಥಿತರಿದ್ದರು.