ಮಡಿಕೇರಿ, ಜು. 3: ಕೊಡಗು ಜಿಲ್ಲೆಯಲ್ಲಿ ತಾ. 3ರಂದು ಹೊಸದಾಗಿ 4 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ.ಈ ಹಿಂದೆ ಸೋಂಕು ದೃಢಪಟ್ಟ ಮಡಿಕೇರಿಯ ಆಸ್ಪತ್ರೆಯ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ಮೂರ್ನಾಡುವಿನ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 49 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತ, ಮಡಿಕೇರಿಯ ಮಹದೇವಪೇಟೆಯ ಚೌಡೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ವಾಸವಿರುವ 27 ವರ್ಷದ ಪುರುಷ ಆರೋಗ್ಯಕರ್ತ, ಭಗವತಿ ನಗರದ 24 ವರ್ಷದ ಪುರುಷ ಆರೋಗ್ಯಕರ್ತ ಹಾಗೂ ವೀರಾಜಪೇಟೆ ಶಾಂತಿನಗರದ 40 ವರ್ಷದ ಪುರುಷರೊಬ್ಬರಿಗೆ ಜ್ವರದ ಲಕ್ಷಣವಿದ್ದು ಅವರಿಗೂ ಸೋಂಕು ದೃಢಪಟ್ಟಿದೆ. ಈ 4 ಪ್ರಕರಣಗಳ ಪೈಕಿ ಜಿಲ್ಲೆಯಲ್ಲಿ ಹೊಸದಾಗಿ 4 ನಿಯಂತ್ರಿತ ಪ್ರದೇಶಗಳು ತೆರೆಯಲಾಗಿದೆ. ಮಡಿಕೇರಿಯ ಆಸ್ಪತ್ರೆ ವಸತಿಗೃಹ, ಭಗವತಿ ನಗರ, ಮಹದೇವಪೇಟೆ ಮತ್ತು ವೀರಾಜಪೇಟೆಯ ಶಾಂತಿನಗರದಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.

(ಮೊದಲ ಪುಟದಿಂದ) ಆದುದರಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 76 ಆಗಿದ್ದು, 3 ಪ್ರಕರಣ ಗುಣಮುಖವಾಗಿರುತ್ತದೆ. 73 ಪ್ರಕರಣಗಳು ಸಕ್ರಿಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು 30 ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಂತಿನಗರದಲ್ಲಿ 41 ಕುಟುಂಬಗಳಿಗೆ ನಿರ್ಬಂಧ

ವೀರಾಜಪೇಟೆ : ವೀರಾಜಪೇಟೆ ಗೋಣಿಕೊಪ್ಪ ರಸ್ತೆಯ ಒಂದು ಭಾಗದಲ್ಲಿರುವ ಶಾಂತಿನಗರದಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ದೃಢವಾದುದರಿಂದ 41 ಕುಟುಂಬಗಳು 192 ಜನಸಂಖ್ಯೆ ಇರುವ ಪ್ರದೇಶವನ್ನು ಇಂದು ಬೆಳಿಗ್ಗೆ ಸೀಲ್‍ಡೌನ್ ಮಾಡಲಾಗಿದ್ದು ಈ ಪ್ರದೇಶದ ಒಳಗೆ ಹೊರಗೆ ಯಾರೂ ಹೋಗದಂತೆ ನಿರ್ಬಂಧಿಸಲಾಗಿದ್ದು ಪ್ರದೇಶದ ದಾರಿಗೆ ಬ್ಯಾರಿಕೇಡ್‍ನಿಂದ ಬಂದ್ ಮಾಡಲಾಗಿದೆ.

ಸೋಂಕಿತ ವ್ಯಕ್ತಿ ಎರಡು ದಿನಗಳ ಹಿಂದೆ ಇಲ್ಲಿನ ದೊಡ್ಡಟ್ಟಿ ಚೌಕಿಯಲ್ಲಿರುವ ಖಾಸಗಿ ಪ್ರಯೋಗಾಲಯದಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಲ್ಲಿನ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳನ್ನು ಸಂಪರ್ಕಿಸಿದ್ದರಿಂದ ಇಂದು ತಾಲೂಕು ಆಡಳಿತ, ಆರೋಗ್ಯ ತಂಡದ ಅಧಿಕಾರಿಗಳು ಈ ಪ್ರಯೋಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿ ಪ್ರಯೋಗಾಲಯಕ್ಕೆ ಬೀಗ ಜಡಿದರು.

ಸೀಲ್‍ಡೌನ್ ಪ್ರದೇಶದ ಹೊರಗಡೆ ಎರಡು ಮಸೀದಿಗಳಿದ್ದು ಇಂದು ಶುಕ್ರವಾರ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಸಾಮೂಹಿಕ ನಮಾಜ್ ಮಾಡಬೇಕಾಗಿದ್ದ ಕಾರ್ಯಕ್ರಮವನ್ನು ಎರಡು ಮಸೀದಿಗಳು ರದ್ದುಗೊಳಿಸಿದವು.

ಶಾಂತಿ ನಗರದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ತಕ್ಷಣ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ಡಿವೈಎಸ್‍ಪಿ ಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಪಟ್ಟಣ ಪಂಚಾಯಿತಿಯ ರೆವಿನ್ಯು ಇನ್ಸ್‍ಪೆಕ್ಟರ್ ಸೋಮೇಶ್ ಸಿಬ್ಬಂದಿಗಳು ದೌಡಾಯಿಸಿ ಸೀಲ್‍ಡೌನ್ ಮಾಡಿ ಪೊಲೀಸ್ ಕಾವಲಿರಿಸಿದ್ದಾರೆ.