ಗೋಣಿಕೊಪ್ಪಲು, ಜು. 3: ನಗರದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿ ಸಂಚಾರ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ಸೂಚನೆ ಮೇರೆಗೆ ನಗರದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳು ಮುಚ್ಚಿ ಎರಡನೇ ದಿನದ ಬಂದ್ ಯಶಸ್ವಿಗೊಳಿಸಿದ್ದಾರೆ.

ನಗರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೂ ನಗರದ ಗೋಣಿಕೊಪ್ಪ, ಮೈಸೂರು, ಮುಖ್ಯ ರಸ್ತೆಯ ಸಮೀಪದಲ್ಲಿ ರುವ ಮೋರ್ ಸೂಪರ್ ಮಾರ್ಕೆಟ್ ಮಾತ್ರ ಯಾವುದೇ ಭಯವಿಲ್ಲದೆ ವ್ಯಾಪಾರ,ವಹಿವಾಟು ನಡೆಸುತ್ತಿತ್ತು.

ಈ ಬಗ್ಗೆ ಸಾರ್ವಜನಿಕರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂತು.

ಪಂಚಾಯಿತಿಯ ನಿಯಮ ಮೀರಿ ವ್ಯಾಪಾರ,ವಹಿವಾಟು ನಡೆಸುತ್ತಿರುವುದು ಸರಿಯಲ್ಲ ಕೂಡಲೇ ಮಳಿಗೆ ಬಂದ್ ಮಾಡುವಂತೆ ಪಿಡಿಒ ಶ್ರೀನಿವಾಸ್ ಅಲ್ಲಿನ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. ಅಲ್ಲದೆ ಪಂಚಾಯಿತಿಯ ನಿಯಮ ಉಲ್ಲಂಘನೆಯ ಅಡಿಯಲ್ಲಿ 5000 ದಂಡ ವಿಧಿಸಿದರು.