ಮಡಿಕೇರಿ, ಜು. 3: ರಾಜ್ಯದಲ್ಲಿ ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಒಂದು ರೀತಿಯಲ್ಲಿ ಗೊಂದಲಮಯವಾಗಿ ಆತಂಕ - ದುಗುಡ - ದುಮ್ಮಾನದೊಂದಿಗೆ ನಡೆದಿದೆ. ಮಾರ್ಚ್ - ಏಪ್ರಿಲ್‍ನಲ್ಲೇ ನಡೆಯಬೇಕಾಗಿದ್ದ ಈ ಪರೀಕ್ಷೆ ಅಂತೂ - ಇಂತೂ ಇದೀಗ ಜುಲೈ ಮೊದಲ ವಾರದಲ್ಲಿ ಮುಕ್ತಾಯ ಗೊಂದಿದೆ. ಜೂನ್ 25 ರಿಂದ ಪರೀಕ್ಷೆ ನಡೆಸಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದ್ದು, ಕೊರೊನಾ ಆತಂಕದ ನಡುವೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವ ಅನಿವಾರ್ಯತೆ ಎದುರಾಗಿತ್ತು.ಇದರಂತೆ ಕೊಡಗಿನಲ್ಲಿಯೂ ಅಗತ್ಯ ಕ್ರಮದೊಂದಿಗೆ ಪರೀಕ್ಷೆ ನಡೆದಿದ್ದು, ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಅವರು, ಜಿಲ್ಲಾಡಳಿತ, ಜಿ.ಪಂ. ಪೊಲೀಸ್ ಇಲಾಖೆ, ಸ್ಕೌಟ್ಟ್ ಮತ್ತು ಗೈಡ್ಸ್, ಆಶಾ ಕಾರ್ಯ ಕರ್ತೆಯರು, ಆರೋಗ್ಯಕರ್ತರೂ ಸೇರಿದಂತೆ ವೈದ್ಯರು ಹಾಗೂ ವಿವಿಧ ಸಂಘ - ಸಂಸ್ಥೆಗಳ ಸಹಾಕಾರ ದೊಂದಿಗೆ ಎಲ್ಲವೂ ಸುಸೂತ್ರವಾಗಿ ನಡೆದಿದೆ ಎಂದು ಸ್ಮರಿಸಿದರು. ಇದರೊಂದಿಗೆ ಶಿಕ್ಷಕರು, ಇಲಾಖಾ ಸಿಬ್ಬಂದಿಗಳೂ ಕ್ರಮ ವಹಿಸಿದ್ದಾರೆ. ಇವರೆಲ್ಲರ ಸಹಕಾರದೊಂದಿಗೆ ಪರೀಕ್ಷಾ ಪ್ರಕ್ರಿಯೆಗೆ ಯಾವದೇ ಸಮಸ್ಯೆಯಾಗಲಿಲ್ಲ ಎಂದು ಮಚ್ಚಾಡೋ ಅವರು ತಿಳಿಸಿದರು.ಶೇ. 99 ರಷ್ಟು ಹಾಜರಾತಿ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 7149 ಮಂದಿ ಪರೀಕ್ಷೆಗೆ ನೋಂದಾಯಿಸಲ್ಪಟ್ಟಿದ್ದರು. ಹೊಸ ಅಭ್ಯರ್ಥಿಗಳು ಸೇರಿ ಖಾಸಗಿ ಅಭ್ಯರ್ಥಿಗಳು ಕಲಿಕಾ ಸಾಮಥ್ರ್ಯ ಕಡಿಮೆ ಇರುವ ಅಭ್ಯರ್ಥಿಗಳು ಹಾಗೂ ಮರು ಪರೀಕ್ಷೆ ತೆಗೆದುಕೊಳ್ಳುವವರು ಸೇರಿದಂತೆ ಈ ಸಂಖ್ಯೆ ಇತ್ತು. ಇದರಲ್ಲಿ ಹೊಸ ಅಭ್ಯರ್ಥಿಗಳ ಹಾಜರಾತಿ ಶೇ. 99ರಷ್ಟಿದ್ದರೆ, ಇನ್ನಿತರ ಅಭ್ಯರ್ಥಿಗಳ ಹಾಜರಾತಿಯಲ್ಲಿ ಶೇ. 3 ರಿಂದ 4 ರಷ್ಟು ಕಡಿಮೆಯಾಗಿದೆ ಎಂದು ಅವರು ಮಾಹಿತಿಯಿತ್ತರು.

ಇಂಗ್ಲಿಷ್ ಭಾಷೆಗೆ ಸಂಬಂಧಿಸಿ ದಂತೆ ಒಟ್ಟು 6740 ಮಂದಿ ನೋಂದಾಯಿತರಾಗಿದ್ದು, ಇವರಲ್ಲಿ 364 ಮಂದಿ ಗೈರಾಗಿದ್ದಾರೆ. ಗಣಿತದಲ್ಲಿ 7164 ಮಂದಿ ಪೈಕಿ 348 ಗೈರಾಗಿದ್ದರೆ, ವಿಜ್ಞಾನದಲ್ಲಿ 6972ರಲ್ಲಿ 374 ಮಂದಿ ಹಾಜರಾಗಿಲ್ಲ. ಸಮಾಜ ವಿಜ್ಞಾನದಲ್ಲಿ 6917 ರಲ್ಲಿ 402 (ಗೈರು) ಕನ್ನಡ 6805ರಲ್ಲಿ 405 (ಗೈರು) ಹಾಗೂ ಹಿಂದಿಯಲ್ಲಿ 6743 ರಲ್ಲಿ 379 ಮಂದಿ ಪರೀಕ್ಷೆ ತೆಗೆದು ಕೊಂಡಿಲ್ಲ. ಆದರೆ ಹೊಸ ಅಭ್ಯರ್ಥಿಗಳ ಪೈಕಿ ಶೇ. 99.5 ರಷ್ಟು ಹಾಜರಾತಿಯಾಗಿದ್ದು, ಇನ್ನಿತರ ಅಭ್ಯರ್ಥಿಗಳ ಗೈರು ಮಾತ್ರ ಹೆಚ್ಚಾಗಿದೆ. ಪರೀಕ್ಷೆಗೆ ನೋಂದಾಯಿಸಿ ಕೊಳ್ಳುವ ಇತರ ಅಭ್ಯರ್ಥಿಗಳ ಗೈರು ಸಹಜವಾಗಿರುತ್ತದೆ ಎಂದು ಮಚ್ಚಾಡೋ ಹೇಳಿದರು. ಜಿಲ್ಲೆಯಲ್ಲಿನ ನಿಯಂತ್ರಿತ ಪ್ರದೇಶಗಳಿಂದ 74 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಸಂದರ್ಭ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಕೂಡ ತಿಳಿಸಿದರು.

ಪರೀಕ್ಷೆ ಸಂದರ್ಭ ಎಲ್ಲಾ ಮುಂಜಾಗ್ರತೆ ವಹಿಸಲಾಗಿದ್ದು, ಸಾರ್ವತ್ರಿಕ ಸಹಕಾರದೊಂದಿಗೆ ಯಶಸ್ಸು ಕಂಡಿರುವದಾಗಿ ಅವರು ನಿರಾಳತೆ ವ್ಯಕ್ತಪಡಿಸಿದರು.