ಮಡಿಕೇರಿ, ಜು. 3: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಪ್ರಸ್ತುತ ತಾ. 5ಕ್ಕೆ ಆದ್ರ್ರಾ ಮಳೆ ಮುಕ್ತಾಯದೊಂದಿಗೆ ತಾ. 6 ರಿಂದ ಪುನರ್ವಸು ಮಳೆ ಅಡಿಯಿಡುವ ಮುನ್ಸೂಚನೆ ಇದೆ. ಈಗಾಗಲೇ ರೈತ ಸಮುದಾಯ ಆಶಾದಾಯಕ ಮಳೆಯ ನಡುವೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಬಯಲು ಸೀಮೆಯ ಪ್ರದೇಶಗಳಲ್ಲಿ ಮುಸುಕಿನ ಜೋಳ ಬಿತ್ತನೆ ಮುಕ್ತಾಯ ಹಂತದಲ್ಲಿದ್ದು, ಭತ್ತದ ನಾಟಿಗೆ ಗ್ರಾಮೀಣ ರೈತರು ಮುಂದಾಗಿದ್ದಾರೆ.ಕುಶಾಲನಗರ ಸುತ್ತಮುತ್ತಲಿನ ಹೆಬ್ಬಾಲೆ, ಶಿರಂಗಾಲ, ಕಣಿವೆ ಹಾಗೂ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಮುಸುಕಿನ ಜೋಳದ ಕೃಷಿಯೊಂದಿಗೆ 48 ಕ್ವಿಂಟಾಲ್ ಬೀಜ ಬಿತ್ತಿ 1800 ಹೆಕ್ಟೇರ್ ಕೃಷಿ ಪೂರ್ಣಗೊಂಡಿದೆ. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮುಟ್ಲು, ಹಮ್ಮಿಯಾಲ, ಹಚ್ಚಿನಾಡು, ಗರ್ವಾಲೆ ಗ್ರಾ.ಪಂ. ಸುತ್ತಮುತ್ತಲಿನ ಸೂರ್ಲಬ್ಬಿ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ ಮುಂತಾದೆಡೆ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಇನ್ನು ಮಡಿಕೇರಿ ತಾಲೂಕಿನ ಇತರೆಡೆಗಳಲ್ಲಿ ಕೂಡ ಭತ್ತದ ಸಸಿಮಡಿ ಸಿದ್ಧಗೊಂಡಿದ್ದು, ಈ ವಾರಾಂತ್ಯಕ್ಕೆ ನಾಟಿಕೆಲಸ ಆರಂಭಗೊಳ್ಳಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ಮಾಹಿತಿ ನೀಡಿದ್ದಾರೆ.
ಅಂತೆಯೇ ಸೋಮವಾರಪೇಟೆ ತಾಲೂಕಿನ ಇತರ ಹೋಬಳಿಗಳು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಸಸಿಮಡಿ ತಯಾರಿಯಲ್ಲಿದ್ದು, ಇನ್ನೆರಡು ವಾರಗಳಲ್ಲಿ ನಾಟಿಗೆ ಚಾಲನೆ ಲಭಿಸುವಂತಾಗಿದೆ. ಜಿಲ್ಲೆಯಲ್ಲಿ ಈಗಿನ ಮುಂಗಾರು ಮಳೆಗಾಲ ಕೃಷಿ ಚಟುವಟಿಕೆ ಹಾಗೂ ರೈತರ ನಿರೀಕ್ಷೆಗೆ ಪೂರಕವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ರೈತ ಸಮುದಾಯ ಕಾಯಕದಲ್ಲಿ ತೊಡಗಿಸಿಕೊಂಡಿದೆ.
ಪ್ರಸ್ತುತ ವಾತಾವರಣ ಮುಂದುವರಿದರೆ, ಕೊಡಗಿನ ರೈತರಿಗೆ ಉತ್ತಮ ಮುಂಗಾರು ಬೆಳೆ ತೆಗೆಯಲು ಈ ವರ್ಷದ ಮಳೆಗಾಲ ಸಹಕಾರಿಯಾಗಲಿದೆ ಎಂಬ ಆಶಯವನ್ನು ಕೃಷಿ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ವಿಮೆ ಮಾಡಿಸಲು ಸಲಹೆ : ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಕೇಂದ್ರ ಸರಕಾರದಿಂದ ಸಹಾಯಧನದೊಂದಿಗೆ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಲ್ಲಿದ್ದು, ರೈತರು ತಾವು ವ್ಯವಹರಿಸುವ ಬ್ಯಾಂಕ್ಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆಯೂ ಕೃಷಿ ಅಧಿಕಾರಿ ರಾಜು ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ಈ ಸಂಬಂಧ ‘ಎಕ್ಷ’ ಭಾರತಿ ಏಜೆನ್ಸಿ ವಿಮಾಕಂತು ಮಾಡಿಸುತ್ತಿದ್ದು, ರೈತರು ಸಹಕಾರ ಹೊಂದಿಕೊಳ್ಳುವಂತೆ ಮಾಹಿತಿಯಿತ್ತಿದ್ದಾರೆ.
ಅಲ್ಲದೆ ಜೋಳ ಬೆಳೆ ನಷ್ಟ ಸಂಬಂಧ ರೈತರಿಗೆ ರೂ. 5 ಸಾವಿರ ಪರಿಹಾರ ಘೋಷಿಸಲ್ಪಟ್ಟಿದ್ದು, ರೈತರು ರೈತ ಸಂಪರ್ಕ ಕೇಂದ್ರಗಳು ಹಾಗೂ ತಮ್ಮ ಬ್ಯಾಂಕ್ಗಳಲ್ಲಿ ಅಗತ್ಯ ಮಾಹಿತಿಯೊಂದಿಗೆ ಪ್ರಯೋಜನ ಪಡೆದುಕೊಳ್ಳಬಹುದು ಎಂದು ನೆನಪಿಸಿದ್ದಾರೆ.
(ಮೊದಲ ಪುಟದಿಂದ) ಒಟ್ಟಿನಲ್ಲಿ ಈ ವರ್ಷದ ಮುಂಗಾರು ಮಳೆ ಆರಂಭಿಕ ದಿನಗಳಲ್ಲಿ ಕೃಷಿಗೆ ಪೂರಕವಾಗಿದೆ ಎಂದು ಅಧಿಕಾರಿ ರಾಜು ಅಭಿಪ್ರಾಯ ನೀಡಿದ್ದಾರೆ. ಭವಿಷ್ಯದಲ್ಲಿ ಇದೇ ರೀತಿ ಸರಾಸರಿ ವಾಡಿಕೆ ಮಳೆಯಾದರೆ ರೈತರು ಅಪಾಯದಿಂದ ಪಾರಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕುಂಬಳದಾಳುವಿನಲ್ಲಿ ನಾಟಿ
ನಾಪೋಕ್ಲು: ಕೊಡಗಿನಲ್ಲಿ ಮುಂಗಾರು ಮಳೆ ಚುರುಕುಗೊಳ್ಳುತ್ತಿದಂತೆ ಭತ್ತದ ಬೇಸಾಯ ಕೆಲಸದಲ್ಲಿ ರೈತರು ತಲ್ಲೀನರಾಗಿದ್ದಾರೆ. ಜಿಲ್ಲೆಯ ಹಲವೆಡೆ ಬಿತ್ತನೆ ಕಾರ್ಯಗಳು ನಡೆಯುತ್ತಿದ್ದರೆ ಕುಂಬಳದಾಳು ಗ್ರಾಮದಲ್ಲಿ ರೈತರು ಭತ್ತದ ನಾಟಿ ಕೆಲಸ ಆರಂಭಿಸಿದ್ದಾರೆ.ಈ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಕೈಗೊಳ್ಳಲಾದ ಮೊದಲ ನಾಟಿ ಇದು. ಗ್ರಾಮದ ಗದ್ದೆಗಳಲ್ಲಿ ಮಳೆಗಾಲದ ಆರಂಭದಲ್ಲಿ ನೀರಾಗುವುದರಿಂದ ಬಿತ್ತನೆ ಕಾರ್ಯ ಬೇಗ ಆಗುತ್ತಿದ್ದು ನಾಟಿ ಕೆಲಸವು ಬೇಗನೆ ಪೂರ್ಣಗೊಳ್ಳುತ್ತಿದೆ.ರೈತರು ಕಾರ್ಮಿಕರ ಅವಲಂಬನೆ ಇಲ್ಲದೇ ತಾವೇ ಕೆಲಸ ಮಾಡುತ್ತಿದ್ದಾರೆ.ಹಲವಾರು ವರ್ಷಗಳಿಂದ ರೈತರು ಸಾಂಪ್ರದಾಯಿಕ ಭತ್ತದ ಬೇಸಾಯ ನಡೆಸುತ್ತಿದ್ದು ಎತ್ತುಗಳ ಬಳಕೆಯಿಂದ ಉಳುಮೆ ಮಾಡುತ್ತಿದ್ದಾರೆ.ಯಂತ್ರಗಳ ಬಳಕೆ ಇಲ್ಲ.ನಾಟಿ ಕೆಲಸವೂ ಕುಟುಂಬಸ್ಥರು ಒಟ್ಟುಗೂಡಿ ನಡೆಸುತ್ತಿರುವುದು ವಿಶೇಷ.
ಕುಂಬಳದಾಳು ಗ್ರಾಮದ ರೈತ ಚಿಲ್ಲನ ಕುಮಾರಪ್ಪ ಭತ್ತದ ಕೃಷಿಯಲ್ಲಿ 34 ವರ್ಷದ ಅನುಭವವನ್ನು ಹೊಂದಿದ್ದು ಸಾಂಪ್ರದಾಯಿಕ ಬೇಸಾಯಕ್ಕೆ ಆದ್ಯತೆ ನೀಡಿ ಎರಡು ಎಕರೆ ಗದ್ದೆಯಲ್ಲಿ ದೊಡ್ಡಿ ಹಾಗೂ ರಾಜಮುಡಿ ಭತ್ತದ ತಳಿಗಳನ್ನು ಬಿತ್ತನೆ ಮಾಡಿ ನಾಟಿಯಲ್ಲಿ ತೊಡಗಿದ್ದಾರೆ.