ಮಡಿಕೇರಿ, ಜು. 2: ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ, ಬಸವನಹಳ್ಳಿ ಗ್ರಾಮದ ಆದಿವಾಸಿಗಳು ವಾಸಿಸುವ ಹಾಡಿಗೆ ರಾತ್ರಿ ಕಾಡಾನೆಯೊಂದು ನುಗ್ಗಿದ್ದು, ಅಲ್ಲಿ ಜೀವನ ನಡೆಸುತ್ತಿದ್ದ ಬಡ ಕುಟುಂಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಆದರೆ ಆನೆ ದಾಳಿ ನಡೆಸಿ ಹಾಡಿಯ ನಿವಾಸಿ ಚಂದ್ರ ಎಂಬವರ ಮನೆ ಜಖಂಗೊಂಡಿದ್ದು, ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ಆನೆ ನಾಶ ಮಾಡಿ, ಧವಸ ಧಾನ್ಯಗಳನ್ನು ತಿಂದಿದ್ದು, ಬಡ ಕುಟುಂಬ ಆಹಾರಕ್ಕಾಗಿ ಪರದಾಡುತ್ತಿದ್ದರು.
ಇದನ್ನು ಮನಗಂಡ ‘ನಮ್ಮ ಕೊಡಗು’ ತಂಡ ಹಾಡಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವುದರ ಮೂಲಕ, ದಾನಿಗಳ ಸಹಾಯದಿಂದ ಆದಿವಾಸಿ ಕುಟುಂಬಕ್ಕೆ ಒಂದೂವರೆ ತಿಂಗಳಿಗೆ ಬೇಕಾಗುವ ಆಹಾರ ಪದಾರ್ಥಗಳು, ಪಾತ್ರೆ, ಚಾಪೆ, ಕಂಬಳಿಗಳನ್ನು ಕೊಡುವುದರ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದಾರೆ. ಹಾಗೂ ಒಂದು ತಿಂಗಳಿಗೆ ಬೇಕಾಗುವ ಖರ್ಚಿನ ಹಣವನ್ನು ಸಹಾ ನೀಡಿದರು.
ಈ ಸಂದರ್ಭ ‘ನಮ್ಮ ಕೊಡಗು’ ತಂಡದ ಸ್ಥಾಪಕ ಅಧ್ಯಕ್ಷ ನೌಷಾದ್ ಜನ್ನತ್, ಅಜಿತ್ ಕೊಟ್ಟಕೇರಿಯನ ಹಾಗೂ ಇತರರು ಇದ್ದರು.
-ಕೆ.ಎಂ ಇಸ್ಮಾಯಿಲ್ ಕಂಡಕರೆ