ಸೋಮವಾರಪೇಟೆ, ಜು. 2: ತಾಲೂಕಿನ ಮಲ್ಲಳ್ಳಿ ಜಲಪಾತದ ಬಳಿಯಿರುವ ಆಯತನ ರೆಸಾರ್ಟ್‍ನಲ್ಲಿ ಸರ್ಕಾರದ ನಿಯಮಗಳನ್ನು ಅನುಸರಿಸಿಯೇ ಕಾರ್ಯನಿರ್ವಹಣೆಯಾಗುತ್ತಿದ್ದು, ಕೋವಿಡ್ ವೈರಸ್ ಆತಂಕದ ಹಿನ್ನೆಲೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರೆಸಾರ್ಟ್‍ನ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.

ರೆಸಾರ್ಟ್‍ನ ಬಗ್ಗೆ ಸ್ಥಳೀಯ ಕೆಲವರು ಮಾಡಿರುವ ಆರೋಪಗಳಲ್ಲಿ ಯಾವದೇ ಹುರುಳಿಲ್ಲ. ಕೊರೊನಾ ವೈರಸ್ ಆತಂಕದ ಹಿನ್ನೆಲೆ ರೆಸಾರ್ಟ್‍ಗೆ ಆಗಮಿಸುವ ಪ್ರವಾಸಿಗರು, ಕೆಲಸಗಾರರನ್ನು ಚಾಚೂತಪ್ಪದೇ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸ್ಯಾನಿಟೈಸರ್ ಸಿಂಪಡಣೆಯೊಂದಿಗೆ ಪ್ರತಿಯೋರ್ವರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ವ್ಯವಸ್ಥಾಪಕಿ ಜೆಸ್ಸಿ ಮ್ಯಾಥ್ಯೂ ತಿಳಿಸಿದ್ದಾರೆ.

ಹೊರ ರಾಜ್ಯಗಳಿಂದ ಯಾವ ಪ್ರವಾಸಿಗರೂ ಸಹ ರೆಸಾರ್ಟ್‍ಗೆ ಬರುತ್ತಿಲ್ಲ. ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರನ್ನು ನಾಲ್ಕೈದು ಹಂತದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ದೃಡೀಕರಣ ಪತ್ರಗಳನ್ನೂ ಪಡೆಯಲಾಗುತ್ತಿದ್ದು, ಪ್ರತಿಯೋರ್ವರ ಮಾಹಿತಿಯನ್ನು ಸಂಗ್ರಹಿಸಿಡಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ವೇಳೆ ಸರ್ಕಾರವೇ ರೆಸಾರ್ಟ್‍ಗಳನ್ನು ಬಂದ್ ಮಾಡುವಂತೆ ಸೂಚಿಸಿದರೆ, ರೆಸಾರ್ಟ್‍ನ್ನು ಬಂದ್ ಮಾಡಲಾಗುವುದು ಎಂದು ಜೆಸ್ಸಿ ಮ್ಯಾಥ್ಯೂ ಅವರು ಅಭಿಪ್ರಾಯಿಸಿದ್ದಾರೆ.