ಸಿದ್ದಾಪುರ, ಜು. 2: ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ವಿಸ್ತಾರ ಮಾಡುತ್ತಲೇ ಇದೆ. ಮಹಾಮಾರಿ ಇಡೀ ದೇಶಾದ್ಯಂತ ಆವರಿಸಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಕೊರೊನಾ ಸಮುದಾಯಿಕವಾಗಿ ಹರಡಿರುವುದರಿಂದ ರಾಜ್ಯದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಅದರಲ್ಲೂ ರಾಜಧಾನಿ ಮೆಟ್ರೊ ನಗರ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಗಿಲು ಮುಟ್ಟಿದೆ. ಮಹಾಮಾರಿ ಇಡೀ ಬೆಂಗಳೂರನ್ನೆ ವಕ್ಕರಿಸಿದೆ.
ಕೊರೊನಾ ಪ್ರಕರಣದಲ್ಲಿ ಹಸಿರು ವಲಯವಾಗಿದ್ದ ಪ್ರಕೃತಿಯ ನೆಲೆ ಬೀಡು ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಮಹಾಮಳೆಯ ಸ್ವರೂಪವನ್ನು ಪಡೆದುಕೊಂಡಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ವ್ಯಕ್ತಿಗಳಲ್ಲೂ ಸೋಂಕು ದೃಢಪಟ್ಟಿರುವ ಪರಿಣಾಮ ಮೂರು ತಿಂಗಳ ಮಗುವಿನಿಂದ ಹಿಡಿದು 87 ವರ್ಷದ ವ್ಯಕ್ತಿಗೂ ಸೋಂಕು ತಗುಲಿದೆ.
ದೇಶದಲ್ಲಿ ಹೆಚ್ಚು ಪ್ರಕರಣ ವರದಿಯಾಗಿರುವ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಜಿಲ್ಲೆಗೆ ಬರುವವರನ್ನು ಸಾಂಸ್ಥಿಕ ಸಂಪರ್ಕ ತಡೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಇನ್ನಿತರ ರಾಜ್ಯಗಳಿಂದ ಬರುವವರನ್ನು ಮನೆಯಲ್ಲೆ ಸಂಪರ್ಕ ತಡೆ ಮಾಡಲಾಗುತ್ತಿದೆ. ಈ ರೀತಿಯಾಗಿ ಸಂಪರ್ಕ ತಡೆಯಲ್ಲಿರುವ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದ್ದ ಪ್ರಕರಣಗಳಲ್ಲಿ ಸೋಂಕಿತ ವ್ಯಕ್ತಿ ಸಂಪರ್ಕ ತಡೆಯಲ್ಲಿದ್ದರಿಂದ ಇತರರಿಗೆ ಸೋಂಕು ತಗುಲುತ್ತಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ಕೊರೊನಾ ಸಮುದಾಯಿಕವಾಗಿ ಶರವೇಗದಲ್ಲಿ ವ್ಯಾಪಿಸುತ್ತಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ತಂಗಿದ್ದ ಜಿಲ್ಲೆಯ ನಿವಾಸಿಗಳು, ಜಿಲ್ಲೆಗೆ ಹಿಂತಿರುಗುತ್ತಿದ್ದಾರೆ. ಜೊತೆಗೆ ವ್ಯಾಪಾರ ವಹಿವಾಟು ಸೇರಿದಂತೆ ಇನ್ನಿತರ ಅವಶ್ಯಕತೆಗಾಗಿ ಬೆಂಗಳೂರಿಗೆ ಹೋಗಿ ಬರುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಈಗೆ ಬರುವವರಲ್ಲಿ ಕೆಲವರು ಮಾತ್ರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದಾರೆ.
ಆದರೆ ಬಹುತೇಕ ಜನರನ್ನು ಸಾಂಸ್ಥಿಕ ಸಂಪರ್ಕ ತಡೆ ಅಥವಾ ಮನೆಯಲ್ಲೇ ಸಂಪರ್ಕ ತಡೆಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದಾರೆ. ಅದೂ ಅಲ್ಲದೆ ಇವರ ಅಂಕಿ ಅಂಶಗಳ ಬಗ್ಗೆ ಸ್ಥಳೀಯ ಆಡಳಿತಕ್ಕಾಗಲಿ ಅಥವಾ ಜಿಲ್ಲಾಡಳಿತಕ್ಕಾಗಲಿ ಸರಿಯಾದ ಮಾಹಿತಿ ಕೂಡ ಇಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ. ಈಗೆ ಬೆಂಗಳೂರು ಸೇರಿದಂತೆ ಕೆಂಪು ವಲಯಗಳಿಂದ ಬಂದವರ ಪೈಕಿ ಹಲವರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೂ ಸೋಂಕು ತಗುಲಿದೆ. ಇದರಿಂದಾಗಿ ಸೋಂಕಿತನ ಮನೆಯವರು, ಕುಟುಂಬಸ್ಥರು ಸೇರಿದಂತೆ ಗ್ರಾಮದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಂಪು ವಲಯಗಳಿಂದ ಜಿಲ್ಲೆಗೆ ಬರುವವರು ಹಾಗೂ ಬಂದವರು ದಯವಿಟ್ಟು ತಮ್ಮ ತಮ್ಮ ಮನೆಯಲ್ಲೇ ಉಳಿಯಬೇಕಾಗಿದೆ. ಕೊರೊನಾ ಬಗ್ಗೆ ಭಯ ಹಾಗೂ ಆತಂಕ ಪಡಬೇಕಾಗಿಲ್ಲ. ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ತಪಾಸಣೆಗೆ ಮುಂದಾಗಬೇಕಾಗಿದೆ. ಮನೆಯವರ, ಕುಟುಂಬಸ್ಥರ ಹಾಗೂ ಊರಿನವರ ಮತ್ತು ಇಡೀ ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಸ್ವತಃ ಕ್ವಾರಂಟೈನ್‍ಗೆ ಒಳಗಾಗುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ ಆಗಿದೆ. ಕೊರೊನಾ ಮಹಾಮಾರಿಯ ವಿರುದ್ಧ ಒಟ್ಟಾಗಿ ಹೋರಾಡೋಣ, ಸರಕಾರದ ನಿಯಮಗಳನ್ನು ಪಾಲಿಸೋಣ. ಎಚ್ಚರಿಕೆ ವಹಿಸೋಣ.
- ಮುಸ್ತಫ ಸಿದ್ದಾಪುರ.