ಗೋಣಿಕೊಪ್ಪಲು, ಜು. 2: ಕೊರೊನಾ ಸೋಂಕಿತ ವ್ಯಕ್ತಿ ಗೋಣಿಕೊಪ್ಪ ನಗರದ ವಿವಿಧ ಭಾಗದಲ್ಲಿ ಸಂಚಾರ ಮಾಡಿರುವ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಗರವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವ ನಿರ್ಧಾರ ಕೈಗೊಂಡ ಪಂಚಾಯಿತಿಯ ಟಾಸ್ಕ್ಫೋರ್ಸ್ ಸಮಿತಿಯ ನಿರ್ಧಾರಕ್ಕೆ ನಗರದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ಬೆಂಬಲ ಸೂಚಿಸಿದರು.
ನಗರವನ್ನು ಗುರುವಾರ ಹಾಗೂ ಶುಕ್ರವಾರದಂದು ಬಂದ್ ಮಾಡುವ ಮೂಲಕ ಸಹಕಾರ ನೀಡುವಂತೆ ಟಾಸ್ಕ್ಫೋರ್ಸ್ ಸಮಿತಿಯು ಮನವಿ ಮಾಡಿತ್ತು. ಪಂಚಾಯಿತಿಯ ಸೂಚನೆಯನ್ನು ಪಾಲಿಸಿದ ನಗರದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳು ಮುಂಜಾನೆಯಿಂದಲೇ ಸಂಪೂರ್ಣ ಬಂದ್ ಮಾಡಿದ್ದರು. ನಗರದಲ್ಲಿ ಓಡಾಡುತ್ತಿದ್ದ ಕೆಲವು ಖಾಸಗಿ ಬಸ್ಗಳು ಸಂಚಾರ ನಡೆಸಲಿಲ್ಲ. ಇದರಿಂದ ನಗರಕ್ಕೆ ಸಾರ್ವಜನಿಕರು ಬರುವ ಪ್ರಯತ್ನ ಮಾಡಲಿಲ್ಲ.
ಸಾರ್ವಜನಿಕರ ಹಿತ ದೃಷ್ಠಿಯಿಂದ ಮುಂಜಾಗೃತ ಕ್ರಮವಾಗಿ ನಗರವನ್ನು ಪಂಚಾಯ್ತಿಯ ಸಿಬ್ಬಂದಿಗಳು ಮುಂಜಾನೆಯಿಂದಲೇ ಆಯಾ ಕಟ್ಟಿನ ಪ್ರದೇಶಗಳು ಸೇರಿದಂತೆ ಪೊಲೀಸ್ ಠಾಣೆ,ವೃತ್ತ ನಿರೀಕ್ಷಕರ ಕಚೇರಿಗಳಲ್ಲಿ ಸ್ಯಾನಿಟೈಸ್ ಮಾಡುವ ಕೆಲಸ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಖುದ್ದು ಸ್ಯಾನಿಟೈಸರ್ ಸಿಂಪಡಿಸುತ್ತಿದ್ದ ಪ್ರದೇಶಗಳಲ್ಲಿ ತೆರಳಿ ಪರಿಶೀಲನೆ ನಡೆಸಿದರು.
ಹಾಲು, ಪೇಪರ್, ಔಷಧಿ ಅಂಗಡಿ, ಪೆಟ್ರೋಲ್ ಬಂಕ್ ತೆರೆದಿದ್ದವು. ನಾಗರಿಕರ ಓಡಾಟ ವಿರಳವಾಗಿತ್ತು. ಎಸ್ಎಸ್ಎಲ್ಸಿ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಎಂದಿನಂತೆ ಆಗಮಿಸಿದ್ದರು. ಮಧ್ಯಾಹ್ನದ ವೇಳೆ ಪರೀಕ್ಷಾ ಕೇಂದ್ರದ ಬಳಿ ಬಂದ ಪೋಷಕರು ತಮ್ಮ ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಕಂಡು ಬಂತು. ನಗರದ ಬ್ಯಾಂಕ್,ಅಂಚೆ ತಿತಿಮತಿ ಮರಪಾಲದಲ್ಲಿ ಸೋಂಕು ಪತ್ತೆಯಾದ ಕಾರಣ ತಿತಿಮತಿ ಜನತೆಯಲ್ಲಿಯೂ ಆತಂಕ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಪಟ್ಟಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಈ ಸಂಬಂಧ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಎರಡು ದಿನಗಳ ಕಾಲ ಬಂದ್ ಮಾಡಿಸಬೇಕು ಎಂದು ಉದ್ಯಮಿ ಎಸ್ ಎಂ.ಚಂಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್.ಎನ್.ಅನೂಪ್, ವಿಎಸ್ ಎಸ್ ಎನ್ ಸದಸ್ಯ ಗೋವಿಂದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಯಾದ ಸ್ಥಳೀಯ ಎಸಿಎಫ್ ಶ್ರೀಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆಡಳಿತಾಧಿಕಾರಿ ಶ್ರೀಪತಿ, ಬಂದ್ ನಡೆಸುವ ಕುರಿತ ಸಾರ್ವಜನಿಕರ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲಾಗುವುದು. ಅವರು ನೀಡಿದ ಸೂಚನೆಯಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
-ಎನ್.ಎನ್. ದಿನೇಶ್