ಸುಂಟಿಕೊಪ್ಪÀ, ಜು. 1: ಸುಂಟಿಕೊಪ್ಪದ ಎಮ್ಮೆಗುಂಡಿ ತೋಟದ ರಸ್ತೆಯಲ್ಲಿ ಕಳೆದ 60 ವರ್ಷಗಳಿಂದ ವಾಸವಾಗಿದ್ದ 70 ವರ್ಷದ ಚೆನ್ನು ಎಂಬ ನಿರ್ಗತಿಕ ಮಹಿಳೆಯೊಬ್ಬರಿಗೆ ಇಂದು ವಿಕಾಸ್ ಜನಸೇವಾ ಟ್ರಸ್ಟಿನ ಜೀವನದಾರಿ ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಯಿತು.

ಇದುವರೆಗೆ ಪೂಜಾರಿ ಮನೆ ಬಾಲಕೃಷ್ಣ ತಮ್ಮ ಮನೆಯ ಸಮೀಪ ಸಣ್ಣ ಕೊಠಡಿಯನ್ನು ನೀಡಿ ಮಾನವೀಯತೆ ಮೆರೆದಿದ್ದರು. ಆದರೆ ಇತ್ತೀಚೆಗೆ ಈ ಕೊಠಡಿ ದುರಸ್ತಿಯಾಗಿರುವುದರಿಂದ ಮಳೆಗಾಲದಲ್ಲಿ ವಾಸಕ್ಕೆ ಅನಾನುಕೂಲವಾಗಿರುವುದರಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಯಿತು. ಇದರೊಂದಿಗೆ ಕೊರೊನಾದ ಲಾಕ್‍ಡೌನ್‍ನಿಂದ ಕಳೆದ 4 ತಿಂಗಳುಗಳಿಂದ ಚೆನ್ನು ಅವರು ತುತ್ತು ಅನ್ನಕ್ಕೂ ಪರಿತಪಿಸುವಂತಹ ಸ್ಥಿತಿಯಲ್ಲಿದ್ದರು. ಇದನ್ನು ಕಂಡಂತಹ ನೆರೆ ಮನೆಯವರಾದ ಸುಮ ಮತ್ತು ಅವರ ಮಗಳು ಸಿಂಚನಾ ತೀರ ಅವಶ್ಯಕತೆ ಇದ್ದಾಗ ಆಹಾರದ ಸಾಮಗ್ರಿಗಳನ್ನು ಕೊಡುತ್ತಾ ಇದ್ದರು. ಜೊತೆಗೆ ಕುಶಾಲನಗರದ ರೋಟರಿ ಮತ್ತು ಸುಂಟಿಕೊಪ್ಪದ ಬ್ಯಾಂಕ್ ಆಫ್ ಬರೋಡದಿಂದ ಆಹಾರದ ಕಿಟ್‍ನ್ನು ಕೂಡ ಕೊಡಿಸಿದ್ದರು.

ಆದರೂ ಸಹ ಆಹಾರದ ಕಿಟ್ ಎಲ್ಲಿಯ ತನಕ ಆ ಹಿರಿಯ ಜೀವಕ್ಕೆ ಆಧಾರವಾದೀತು? ಅದು ಕೂಡ ಮುಗಿದು ಮತ್ತೆ ಅನ್ನ, ಸೂರು ಇಲ್ಲದ ಸ್ಥಿತಿಗೆ ಬಂದಿದ್ದನ್ನು ಮನಗಂಡ ನೆರೆ ಮನೆಯ ತಾಯಿ, ಮಗಳು ಮತ್ತೆ ಈ ಬಾರಿ ಈ ಹಿರಿ ಜೀವಕ್ಕೆ ಶಾಶ್ವತ ಪರಿಹಾರ ನೀಡಲೇಬೇಕೆಂಬ ದಿಟ್ಟ ನಿರ್ಧಾರ ವನ್ನು ಇಟು ್ಟಕೊಂಡು ಇಂದು ವಿಕಾಸ್ ಜನಸೇವಾ ಟ್ರಸ್ಟಿನ ಮುಖ್ಯಸ್ಥ ರಮೇಶ ಹೆಚ್.ಕೆ ಅವರ ಜೊತೆ ಚೆನ್ನುರವರ ಸಮಸ್ಯೆಗಳನ್ನು ತಿಳಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಕೇಳಿಕೊಂಡರು.

ತಾಯಿ, ಮಗಳ ಕೋರಿಕೆ ಮೇರೆಗೆ ಆಶ್ರಮದ ಅಧ್ಯಕ್ಷರು ಸ್ಥಳಕ್ಕೆ ಧಾವಿಸಿ ಅಜ್ಜಿಯ ಪೂರ್ವಾಪರ ತಿಳಿದು ಅಜ್ಜಿಯನ್ನು ರಕ್ಷಿಸಿ ತಮ್ಮ ಆಶ್ರಮಕ್ಕೆ ಕರೆದೊಯ್ದರು. ರಕ್ಷಣಾ ಕಾರ್ಯದಲ್ಲಿ ನೆರೆ ಮನೆಯ ತಾಯಿ, ಮಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.