ಗೋಣಿಕೊಪ್ಪಲು, ಜು. 1 : ತಿತಿಮತಿ ಸಮೀಪದ ಮರಪಾಲದ (65 ವರ್ಷದ) ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ. ತಹಶೀಲ್ದಾರ್ ನಂದೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್, ಪೊನ್ನಂಪೇಟೆ ಉಪ ತಹಶೀಲ್ದಾರ್ ರಾಧಾಕೃಷ್ಣ ಅವರು ಸೋಂಕಿತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ವ್ಯಕ್ತಿಯನ್ನು ಸ್ಥಳಾಂತರಿಸಿದರು. ಯಾವುದೇ ಸೋಂಕಿತರ ಸಂಪರ್ಕ ಇವರಿಗೆ ಇರಲಿಲ್ಲ ಎಂದು ತಿಳಿದು ಬಂದಿದೆ. ಆದರೆ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ಆಗಾಗ್ಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಗೋಣಿಕೊಪ್ಪಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಅಲ್ಲಿ ಇವರ ಗಂಟಲಿನ ದ್ರವವನ್ನು ಪರೀಕ್ಷೆಗೆಂದು ಮಡಿಕೇರಿಯ ಪ್ರಯೋಗಾಲಯಕ್ಕೆ ಕಳಿಸಿದಾಗ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ.
ಬೆಳೆಗಾರರಾಗಿರುವ ಇವರು ಗೋಣಿಕೊಪ್ಪಲಿನ ಹರಿಶ್ಚಂದ್ರಪುರದ ಹೆದ್ದಾರಿ ಬದಿಯಲ್ಲಿ ಕೃಷಿ ಉಪಕರಣಗಳ ಮಾರಾಟ ಮಳಿಗೆಯನ್ನಿಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಪತ್ನಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಪುತ್ರ ಸೇರಿದಂತೆ ಮನೆಯಲ್ಲಿ ಮೂರು ಮಂದಿ ಇದ್ದರು. ಇದೀಗ ಮನೆ ಹಾಗೂ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಕಾಫಿತೋಟದ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರ ಆರೋಗ್ಯದ ಬಗೆಗೂ ಗಮನಹರಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ.ಯತಿರಾಜ್ ತಿಳಿಸಿದರು.
-ಎನ್.ಎನ್.ದಿನೇಶ್