ವೀರಾಜಪೇಟೆ, ಜು. 1: ವೀರಾಜಪೇಟೆ ತಾಲೂಕಿನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಸಂತೆಯನ್ನು ರದ್ದುಗೊಳಿಸಿದ್ದರಿಂದ ಗ್ರಾಮಾಂತರ ಪ್ರದೇಶದಿಂದ ಬಂದ ಜನರು ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಆಜು ಬಾಜಿನಲ್ಲಿರುವ ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಿದರು. ವೀರಾಜಪೇಟೆಗೆ ಬಂದ ಜನಸಂಖ್ಯೆ ವಿರಳವಾದರೂ ಸುತ್ತ ಮುತ್ತಲಿನ ಮಾರ್ಜಿನ್ ಫ್ರೀ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಅಧಿಕವಾಗಿತ್ತು. ಮಾರ್ಜಿನ್ ಫ್ರೀ ಮಳಿಗೆಗಳಲ್ಲಿ ಗ್ರಾಹಕರು ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಸರದಿ ಪ್ರಕಾರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.
ವೀರಾಜಪೇಟೆಯ ಬದ್ರಿಯಾ ಜಂಕ್ಷನ್ ಬಳಿಯ ಫುಟ್ಪಾತ್ನಲ್ಲಿಯೂ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಖಾಸಗಿ ಸುತ್ತ ಮುತ್ತಲಿರುವ ತರಕಾರಿ ಅಂಗಡಿಗಳಲ್ಲಿ ಸಂತೆ ರದ್ದಾದುದರಿಂದ ಗ್ರಾಹಕರು ತರಕಾರಿ ಅಂಗಡಿಗಳಲ್ಲಿ ತರಕಾರಿ ಖರೀದಿಸುತ್ತಿದ್ದುದು ಕಂಡು ಬಂತು. ಮೀನುಪೇಟೆ ಒಂದು ಭಾಗದಲ್ಲಿ ಸೀಲ್ಡೌನ್ ಪೊಲೀಸ್ ಬಿಗಿ ಬಂದೋಬಸ್ತ್. ದುಬೈಯಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೀನುಪೇಟೆಯ ಒಂದು ಭಾಗವನ್ನು ಸೀಲ್ಡೌನ್ ಮಾಡಿ
ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಿದ್ದರಿಂದ ಈ ಸೀಲ್ ಡೌನ್ ಮಾಡಿದ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಾವಲಿರಿಸಲಾಗಿದೆ. ಸೀಲ್ಡೌನ್ ಪ್ರದೇಶದಲ್ಲಿ 55 ಕುಟುಂಬಗಳಿದ್ದು ಈ ಪೈಕಿ 7 ಮಂದಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದಾರೆ. ಎಲ್ಲರನ್ನೂ ಪ್ರಾಥಮಿಕ ಹಂತದಲ್ಲಿ ಆರೋಗ್ಯ ತಪಾಸಣೆ ಮಾಡಿ ನಿತ್ಯ ಆಂಬ್ಯುಲೆನ್ಸ್ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗುತ್ತಿದೆ. ಪ್ರತ್ಯೇಕ ಕೊಠಡಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಹಿಂದಿರುಗಿ ಸೀಲ್ಡೌನ್ ಪ್ರದೇಶದ ಅವರ ಮನೆಗಳಿಗೆ ಕಳಿಸಲಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದರು. ಮೀನುಪೇಟೆಯ ಒಂದು ಭಾಗದ ಸೀಲ್ಡೌನ್ ಪ್ರದೇಶದಲ್ಲಿದ್ದ ನಾಲ್ಕು ಮಂದಿ ವ್ಯಾಪಾರಿಗಳು ತಪ್ಪಿಸಿಕೊಂಡು ಹೊರ ಬಂದು ಅಂಗಡಿ ತೆರೆದಿದ್ದುದನ್ನು ಕಡ್ಡಾಯವಾಗಿ ಮುಚ್ಚಿಸಲಾಗಿದೆ. ಅವರ ವಿರುದ್ಧ ಪೊಲೀಸರಿಗೂ ದೂರು ನೀಡಲಾಗಿದ್ದು ಈ ವ್ಯಾಪಾರಿಗಳ ಬಗ್ಗೆ ನಿಗಾ ಇರಿಸುವಂತೆ ನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಸ್ವಯಂ ಪ್ರೇರಣೆಯಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಲು ವರ್ತಕರು ಸೇರಿದಂತೆ ಎಲ್ಲರೂ ಸಹಕರಿಸಬೇಕೆಂದು ನಂದೀಶ್ ತಿಳಿಸಿದರು.