ಮಡಿಕೇರಿ, ಜು. 1: ನಗರದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಪೆರಾಜೆಯಲ್ಲಿ ಸ್ಮಶಾನ ಇಲ್ಲದೆ ಜನತೆ ಸಂಕಷ್ಟ ಅನುಭವಿಸುತ್ತಿದ್ದು ಅಂತ್ಯಸಂಸ್ಕಾರವನ್ನು ಬೇರೆಡೆ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಈ ಬಗ್ಗೆ ಕಂದಾಯ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಆರೋಪಿಸಿದರು. ಹಲವು ಬಾರಿ ಈ ವಿಚಾರವಾಗಿ ಮನವಿ ಮಾಡಲಾಗಿದೆ. ಆದರೆ, ಸಮಸ್ಯೆ ಮಾತ್ರ ಇತ್ಯರ್ಥವಾಗಿಲ್ಲ ಎಂದು ದೂರಿದರು.

ತಾ.ಪಂ. ಅಧ್ಯಕ್ಷರಿಗೆ ಇದು ನಾಚಿಕೆಗೇಡಿನ ಸಂಗತಿ, ತಹಶೀಲ್ದಾರ್ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್ ಆರೋಪ ಸತ್ಯಕ್ಕೆ ದೂರವಾಗಿದೆ. ಈ ಸಂಬಂಧ ಹಲವು ಬಾರಿ ಪರಿಶೀಲನೆ ಮಾಡಿದ್ದೇನೆ. ಪ್ರಸ್ತಾವನೆ ಸಲ್ಲಿಸಿದ್ದೇನೆ. ನನ್ನ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ತಾ.ಪಂ. ಅಧ್ಯಕ್ಷೆಗೆ ನಾಚಿಕೆಯಾಗಬೇಕು ಎಂಬ ಪದ ಬಳಸಿದ ಹಿನ್ನೆಲೆ ಅಧ್ಯಕ್ಷೆ ಶೋಭಾ ಮೋಹನ್ ಕೂಡ ನಾಗೇಶ್ ವಿರುದ್ಧ ಹರಿಹಾಯ್ದರು, ಮಹಿಳೆಯರಿಗೆ ಗೌರವ ನೀಡಿ, ಸಭೆಯಲ್ಲಿ ಈ ರೀತಿ ಶಬ್ಧ ಬಳಸಬಾರದು. ಮೇ 3 ರಿಂದ ನಾನು ನಿತ್ಯ ಕಚೇರಿಗೆ ಬರುತ್ತಿದ್ದೇನೆ. ನೀವು ಬಂದಿದ್ದೀರ ಸಮಸ್ಯೆ ಬಗ್ಗೆ ಹೇಳಿದ್ದೀರಾ. ಪ್ರಸ್ತಾಪಿಸಿ ಸುಮ್ಮನಿರುವುದಲ್ಲ, ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕು ಎಂದು ಆಕ್ರೋಶದಿಂದ ನುಡಿದರು.

ಸದಸ್ಯ ನಾಗೇಶ್ ಮಾತನಾಡಿ, ಪೆರಾಜೆ ಕಂದಾಯ ಪರಿವೀಕ್ಷಕ ಸರಿಯಾಗಿ ಕೆಲಸ ಮಾಡುತ್ತಿಲ್ಲ. 3 ಬಾರಿ ಅಮಾನತ್ತಾದ ಅಧಿಕಾರಿಯಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸದಸ್ಯ ಅಪ್ರು ರವೀಂದ್ರ ಅರೆಕಾಡುವಿನಲ್ಲಿ ಸ್ಮಶಾನ ಇಲ್ಲದೆ, ನದಿ ಬದಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಇದು ಕಾನೂನು ಪ್ರಕಾರ ತಪ್ಪು. ಆದರೆ, ಜಾಗವಿಲ್ಲದಿರುವುದರಿಂದ ಅಲ್ಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಹಶೀಲ್ದಾರ್ 15 ದಿನ ಕಾಲವಕಾಶ ನೀಡುವಂತೆ ಮನವಿ ಮಾಡಿದಾಗ, ನಾಗೇಶ್ 15 ದಿನಗಳ ಬಳಿಕ ಸಭೆಗೆ ಬರುತ್ತೇನೆ ಎಂದು ಹೇಳಿ ಹೊರನಡೆಯಲು ಮುಂದಾದರು ಈ ವೇಳೆ ಸದಸ್ಯರು ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

15 ದಿನದೊಳಗೆ ಪೆರಾಜೆ ಸೇರಿದಂತೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳನ್ನು ಸರ್ವೇ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸವಾಗಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ಸದಸ್ಯ ನಾಗೇಶ್, ಕೆಲವೆಡೆ ಪಡಿತರ ಪೂರೈಕೆಯನ್ನು ತಡೆಹಿಡಿಯಲಾಗಿದೆ ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಕೇವಲ ಕಾರ್ಮಿಕರಿಗೆ ಮಾತ್ರ ಈ ನಿಯಮ ಮಾಡಿದ್ದು, ಮಧ್ಯಾಹ್ನ 1 ಗಂಟೆ ಬಳಿಕ ವಲಸೆ ಕಾರ್ಮಿಕರಿಗೆ ವಿತರಣೆ ಕಾರ್ಯ ತಡೆದಿರುವುದು ನಿಜ. ಇತರರಿಗೆ ಎಂದಿನಂತೆ ಪಡಿತರ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಕುಂದಚೇರಿ ಭಾಗದಲ್ಲಿ ಸೊಸೈಟಿ ತೆರೆಯುತ್ತಿಲ್ಲ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶ್ರೀಧರ್ ದಬ್ಬಡ್ಕ ಆಕ್ಷೇಪ ವ್ಯಕ್ತಪಡಿಸಿದಾಗ ಉತ್ತರಿಸಿದ ಅಧಿಕಾರಿ ಭಾಗಮಂಡಲದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಲೈಸನ್ಸ್ ನೀಡಿದ್ದು ಅದನ್ನು ಕುಂದಚೇರಿಗೆ ವಿಸ್ತರಿಸಲಾಗಿದೆ. ಕುಂದಚೇರಿಗೆ ಪ್ರತ್ಯೇಕ ಅಂಗಡಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಚೆಸ್ಕಾಂ ಅಧಿಕಾರಿ ಸಭೆಗೆ ನಿರಂತರ ಗೈರಾಗುತ್ತಿದ್ದಾರೆ ಎಂದು ತಾ.ಪಂ ಅಧ್ಯಕ್ಷೆ ಶೋಭಾ ಮೋಹನ್ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಯನ್ನು ಸಭೆಗೆ ಕರೆಸುವಂತೆ ಸೂಚಿಸಿದರು.

ಪ್ರಭಾರ ಅಧಿಕಾರದಲ್ಲಿದ್ದ ಚೆಸ್ಕಾಂನ ದೇವಯ್ಯ ಸಭೆಗೆ ಆಗಮಿಸಿದರು, ಸ್ಥಳೀಯವಾಗಿ ಲೈನ್‍ಮೆನ್‍ಗಳು ವಾಸ್ತವ್ಯ ಹೂಡುತ್ತಿಲ್ಲ. ವಿದ್ಯುತ್ ವ್ಯತ್ಯಯ ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ. ಕುಂದಚೇರಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ನೆಲಕ್ಕುರುಳಿತ್ತು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಪಾರಾಣೆಯಲ್ಲಿ ಕಂಬದಿಂದ ಕಂಬಕ್ಕೆ ಸಂಪರ್ಕ ನೀಡಲು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸದಸ್ಯೆ ಉಮಾಪ್ರಭು ಆರೋಪಿಸಿದರು.

ಬಂದೂಕು ಪರವಾನಗಿ ಪಡೆಯಲು ಎಲ್ಲಾ ದಾಖಲಾತಿ ನೀಡುವುದರ ಜೊತೆಗೆ ಪರವಾನಿಗೆ ನವೀಕರಣಕ್ಕೂ ಎಲ್ಲಾ ರೀತಿಯ ದಾಖಲಾತಿ ನೀಡಬೇಕಾಗಿದೆ. ಜಮ್ಮಾ ವಿನಾಯಿತಿ ರೀತಿಯಲ್ಲಿ, ಸಾಗುವಳಿದಾರರಿಗೂ ಬಂದೂಕು ಪರವಾನಗಿ ನೀಡಬೇಕು ಈ ಬಗ್ಗೆ ನಿರ್ಣಯವಾಗಬೇಕೆಂದು ಕುಂದಲ್ಪಾಡಿ ನಾಗೇಶ್ ಮನವಿ ಮಾಡಿದರು.

ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಯಂತ್ರೋಪಕರಣ ಸಂಬಂಧ ಆದೇಶ ಬಂದಿಲ್ಲ ಎಂದು ಕೃಷಿ ಅಧಿಕಾರಿ ತಿಳಿಸಿದರು.

ತೋಟಗಾರಿಕೆ ಇಲಾಖೆ ಮೂಲಕ ತಾಲೂಕಿನ 4 ಹೋಬಳಿಗೆ ತಲಾ ರೂ 25 ಸಾವಿರದಂತೆ ತರಬೇತಿಗಾಗಿ ಮೀಸಲಿರಿಸಲಾಗಿದೆ. ಈ ಬಗ್ಗೆ ಅನುಮೋದನೆ ನೀಡಬೇಕೆಂದು ಹೇಳಿದರು. ಹೂ, ತರಕಾರಿ ಬೆಳೆಗಾರರಿಗೆ ಸಹಾಯ ಧನಕ್ಕೆ ಕ್ರಮಕೈಗೊಳ್ಳಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅನುದಾನ ಬಿಡುಗಡೆಯಾದ ನಂತರ ಕರಿಮೆಣಸು ಹಾಗೂ ಕಿತ್ತಳೆ ಗಿಡ ವಿತರಿಸಲಾಗುತ್ತದೆ ಎಂದು ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.

ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಕೆ.ಲಕ್ಷ್ಮೀ ಮಾತನಾಡಿ, ಅನಿರ್ಬಂಧಿತ ಅನುದಾನ ರೂ. 50 ಲಕ್ಷ ಬಿಡುಗಡೆಯಾಗಿದೆ. ಆದರೆ, ಇನ್ನೂ ಖಾತೆಗೆ ಹಣ ಸಂದಾಯವಾಗಿಲ್ಲ. ರೂ 2 ಕೋಟಿಗೆ ಕ್ರಿಯಾಯೋಜನೆ ತಯಾರಿಸಬೇಕಾಗಿದೆ. ಎನ್‍ಆರ್‍ಇಜಿ ಅಡಿಯಲ್ಲಿ ಉತ್ತಮವಾಗಿ ಕೆಲಸ ಮಾಡಿ ಗುರಿ ಮುಟ್ಟಲಾಗಿದೆ. ವಸತಿ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ಮಡಿಕೇರಿ ತಾಲೂಕು ನಾಲ್ಕನೆ ಸ್ಥಾನದಲ್ಲಿದೆ ಎಂದರು. ವಿಶೇಷ ಚೇತನರ ಕಾರ್ಯಕ್ರಮಗಳಿಗೆ ತಾ.ಪಂ. ಸಭಾಂಗಣವನ್ನು ಮೀಸಲಿಡುವ ಬಗ್ಗೆ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿದ್ದು, ಜನರು ಮುಂಜಾಗ್ರತೆ ಕ್ರಮವಹಿಸಬೇಕು. ಬೆಂಗಳೂರಿನಿಂದ ಬಂದವರು ಮನೆಯಿಂದ ಹೊರಬಾರದೆ ಕೈಜೋಡಿಸಬೇಕೆಂದು ಸಭೆಯಲ್ಲಿ ತಾ.ಪಂ ಇಓ ಲಕ್ಷ್ಮೀ ಮನವಿ ಮಾಡಿದರು.

ಈಗಾಗಲೇ ಮಹಾರಾಷ್ಟ್ರದಿಂದ ಬಂದವರನ್ನು ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಿಸಲಾಗುತ್ತದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಂಸ್ಥಿಕ ಸಂಪರ್ಕ ತಡೆಯಲ್ಲಿರುವವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ ಗ್ರಾಮ ಪಟ್ಟದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ. ಕೊರೊನಾ ಸಂಬಂಧ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಸಂತು ಸುಬ್ರಮಣಿ, ಸದಸ್ಯರಾದ ಕುಮುದಾ ರಶ್ಮಿ, ಶಶಿ, ಇಂದಿರಾ, ಗಣಪತಿ, ರಾಯ್ ತಮ್ಮಯ್ಯ ಇದ್ದರು.