ಮಡಿಕೇರಿ, ಜು. 1: ಐತಿಹಾಸಿಕ ಕೋಟೆ ಅರಮನೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಾಚ್ಯ ವಸ್ತು ಇಲಾಖೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕೋಟೆ ದುರಸ್ತಿ ಕಾರ್ಯ ನಡೆಯುತ್ತಿಲ್ಲ ಎಂದು ಅರ್ಜಿದಾರರಾದ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಂದು ಕೋಟೆಗೆ ಭೇಟಿ ನೀಡಿದ್ದ ಅವರು ದುರಸ್ತಿ ಕಾಮಗಾರಿಯ ಬಗ್ಗೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ಚಂದ್ರಕಾಂತ್ ಅವರಿಂದ ಕಾಮಗಾರಿಯ ಮಾಹಿತಿ ಪಡೆದರು. ಕೋಟೆ ದುರಸ್ತಿಗೆ ಸಂಬಂಧಿಸಿದಂತೆ ಸುಮಾರು 8 ಕೋಟಿಯಷ್ಟು ಹಣ ಸರ್ಕಾರದಿಂದ ಬಿಡುಗಡೆಯಾಗಿದೆ. ಹೀಗಿರುವಾಗ ರೂ. 53ಲಕ್ಷ ವೆಚ್ಚದಲ್ಲಿ ಪ್ರಾಚ್ಯವಸ್ತು ಇಲಾಖೆ ಕಾಮಗಾರಿ ನಡೆಸುವ ಔಚಿತ್ಯವೇನು ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಕಾಂತ್ ಪ್ರಸ್ತುತ ನಮ್ಮ ಇಲಾಖೆಗೆ ರೂ. 53 ಲಕ್ಷ ಮಾತ್ರ ಹಣ ಬಂದಿದ್ದು, (ಮೊದಲ ಪುಟದಿಂದ) 8 ಕೋಟಿ ಹಣದ ಬಗ್ಗೆ ಮಾಹಿತಿ ಇಲ್ಲ ಎಂದರು. ಇದಕ್ಕೆ ಅಸಮಾಧಾನಗೊಂಡ ವಿರೂಪಾಕ್ಷಯ್ಯ ನ್ಯಾಯಾಲಯದಲ್ಲಿ ಸರ್ಕಾರಿ ಮಟ್ಟದ ಅಧಿಕಾರಿ 8 ಕೋಟಿ ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಿರುವಾಗ ತಾವು ಆ ಬಗ್ಗೆ ಮಾಹಿತಿಯೆ ಎಲ್ಲ ಎನ್ನುತ್ತಿರುವದು ಆಶ್ಚರ್ಯ ಮೂಡಿಸುತ್ತಿದೆ ಎಂದರಲ್ಲದೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿಲ್ಲ ಎಂದು ದೂರಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿರೂಪಾಕ್ಷಯ್ಯ, ಕೋಟೆ ದುರಸ್ತಿಗೆ ಸರ್ಕಾರ ಅನುದಾನ ನೀಡಿದೆ. ಆದರೆ ಪ್ರಾಚ್ಯವಸ್ತು ಇಲಾಖೆ ದುರಸ್ತಿ ಕಾರ್ಯ ಮಾಡಲು ಶೇ. 10 ರಷ್ಟು ಹಣವನ್ನು ಸೇವಾ ಶುಲ್ಕವಾಗಿ ಕೇಳುತ್ತಿದೆ. ಇದು ಸರಿಯಲ್ಲ ಜೊತೆಗೆ ಕಾಮಗಾರಿಯನ್ನು ಚುರುಕಾಗಿ ನಡೆಸುತ್ತಿಲ್ಲ. ಆದ್ದರಿಂದ ಉತ್ತಮ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪರಿಶೀಲನೆ ನಡೆಸಲು ನಿವೃತ್ತ ಇಂಜಿನಿಯರ್ ಟಿ.ಡಿ. ಮನಮೋಹನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಕಾರ್ಯೊನ್ಮುಖವಾಗುವಂತಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ವೀರಶೈವ ಸಮಾಜದ ಶಾಂಬಶಿವಮೂರ್ತಿ ಮತ್ತಿತರರು ಇದ್ದರು.