ಸೋಮವಾರಪೇಟೆ,ಜು.1: ಕ್ಷುಲ್ಲಕ ವಿಚಾರಕ್ಕೆ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ, ಈರ್ವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ರಾತ್ರಿ ಪಟ್ಟಣ ಸಮೀಪದ ಐಗೂರು ಗ್ರಾಮದಲ್ಲಿ ನಡೆದಿದೆ.

ಯಮಹಾ ಬೈಕ್‍ನ ಶಬ್ದದ ವಿಚಾರದಲ್ಲಿ ಜಗಳ ತೆಗೆದು ಹಲ್ಲೆ ನಡೆಸಿರುವದಾಗಿ ಒಂದು ಗುಂಪಿನ ಯುವಕ ದೂರು ನೀಡಿದ್ದರೆ, ಹಳೇ ವೈಷಮ್ಯದ ಹಿನ್ನೆಲೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮತ್ತೊಂದು ಗುಂಪಿನ ಯುವಕ ದೂರು ನೀಡಿದ್ದಾನೆ.

ಯಮಹಾ ಬೈಕ್‍ನ ಶಬ್ದದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ನಡುವೆ ತನ್ನ ಮೇಲೆ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ ಎಂದು ಐಗೂರಿನ ಪ್ರೇಮನಗರ ನಿವಾಸಿ ಎ.ಆರ್. ಶಮಂತ್ ದೂರು ನೀಡಿದ್ದರೆ, ತರಕಾರಿ ಮಾರಾಟ ಮಾಡಿ ವಾಪಸ್ ಆಗುತ್ತಿದ್ದ ಸಂದರ್ಭ ದಾರಿ ತಡೆದು ಹಳೆ ವೈಷಮ್ಯದ ಹಿನ್ನೆಲೆ ತನ್ನ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಯಡವಾರೆ ಗ್ರಾಮದ ಬಿ.ಹೆಚ್. ಯೋಗೇಶ್ ಎಂಬಾತ ದೂರು ನೀಡಿದ್ದಾನೆ.

ಎರಡು ಗುಂಪಿನವರು ಪಟ್ಟಣದ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದು, 12 ಮಂದಿ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಗಾಯಾಳುಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಐಗೂರು ಪ್ರೇಮಾನಗರದ ಎ.ಆರ್.ಶಮಂತ್ ನೀಡಿದ ದೂರಿನನ್ವಯ ಆರೋಪಿಗಳಾದ ರತೀಶ್ ರೈ, ಯತೀಶ್ ರೈ, ರಾಜಾ, ದರ್ಶನ್, ದರ್ಶಿತ್, ಸಂತೋಷ್, ಯೋಗೇಶ್, ಪುನೀತ್, ರಂಜಿತ್, ಬಿಪಿನ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಇನ್ನೊಂದು ಗುಂಪಿನ ಯಡವಾರೆ ಗ್ರಾಮದ ಬಿ.ಎಚ್.ಯೋಗೇಶ್ ನೀಡಿದ ದೂರಿನಂತೆ, ಆರೋಪಿಗಳಾದ ಪ್ರವೀಣ್, ಶ್ಯಾಂ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಠಾಣಾಧಿಕಾರಿ ಶಿವಶಂಕರ್ ಅವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.