ವೀರಾಜಪೇಟೆ, ಜೂ. 30: ಕೌಟುಂಬಿಕ ವಿಷಯಗಳು ಅಲ್ಲದೆ ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿ ಮಾಡಲಾಗದೆ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೀರಾಜಪೇಟೆ ಕಣ್ಣಂಗಾಲದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕು ಅಮ್ಮತ್ತಿ ಒಂಟಿಯಂಗಡಿ ಕಣ್ಣಂಗಾಲ ನಿವಾಸಿ ವಿ.ಜಿ. ರಮೇಶ್ (61) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕಣ್ಣಂಗಾಲದಲ್ಲಿ ಸುಮಾರು 10 ಎಕರೆ ಕಾಫಿ ತೋಟ ಹೊಂದಿದ್ದು, ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಕಿರಿಯ ಮಗ ಚಂದ್ರಹಾಸ ಅವರಿಗೆ ಸೊಂಟ ಸ್ವಾಧೀನ ಕಳೆದುಕೊಂಡು ಅಸ್ವಸ್ಥರಾಗಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದಿರುವ ಚಿಂತೆ ಕಾಡುತಿತ್ತು ಎನ್ನಲಾಗಿದೆ.
ಕಾಫಿ ತೋಟದಲ್ಲಿ ನಷ್ಟ ಅನುಭವಿಸಿಸುವುದರೊಂದಿಗೆ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡಲಾಗದೆ ಮಾನಸಿಕವಾಗಿ ನೊಂದಿದ್ದರು. ತಾ. 29 ರಂದು ಸಂಜೆ ಮನೆಯಿಂದ ಹೊರಟು ತಮ್ಮ ಕಾಫಿ ತೋಟಕ್ಕೆ ಹೊಂದಿಕೊಂಡಂತಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಿರಿಯ ಮಗ ಯತಿರಾಜ್ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಶವದ ಮಹಜರು ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
-ಕೆ.ಕೆ.ಎಸ್.