ಮಡಿಕೇರಿ, ಜೂ. 30: ಕೋವಿಡ್-19 ಪರಿಸ್ಥಿತಿ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುವ ವಿಚಾರ. ಮುಂದಿನ ಪೀಳಿಗೆಗೆ ಎಚ್.ಟಿ. ಅನಿಲ್ ಅವರ ‘ಲಾಕ್ಡೌನ್ ಡೈರಿ’ ಪುಸ್ತಕ ಗೆಜೆಟೀಯರ್ ರೀತಿಯಲ್ಲಿ ಉಳಿಯಲಿದೆ ಎಂದು ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅಭಿಪ್ರಾಯಪಟ್ಟರು.ನಗರದ ವಿಜಯ ವಿನಾಯಕ ದೇವಾಲಯದಲ್ಲಿ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ ಅವರ ಚೊಚ್ಚಲ ಕೃತಿ ‘ಲಾಕ್ಡೌನ್ ಡೈರಿ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿದ ಅವರು, ಶಕ್ತಿ ಪತ್ರಿಕೆಯಲ್ಲಿ ಜನಮನ್ನಣೆಗೆ ಪಾತ್ರವಾದ ಅಂಕಣವನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಓದುಗರಿಂದ ಉತ್ತಮ ಪ್ರತಿಕ್ರಿಯೆ ಈ ಅಂಕಣಕ್ಕೆ ವ್ಯಕ್ತವಾಗಿತ್ತು. ಕೋವಿಡ್-19 ಪರಿಸ್ಥಿತಿ ದೇಶದ ಜನಜೀವನದ ಮೇಲೆ ಪ್ರತಿಕೂಲ ಪರಿಸ್ಥಿತಿ ತಂದು ಶಾಪವಾಗಿ ಪರಿಣಮಿಸಿದೆ. ಕೊಡಗು ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿಯನ್ನು ಎದುರಿಸಿದ ವಿಚಾರದ ಬಗ್ಗೆ ‘ಲಾಕ್ಡೌನ್ ಡೈರಿ’ ಬಿಚ್ಚಿಟ್ಟಿದೆ.
ಮುಂದಿನ ಪೀಳಿಗೆಗೆ ದಾಖಲೆ ಯಾಗಿ ಈ ಪುಸ್ತಕ ಗೆಜೆಟೀಯರ್ ರೀತಿಯಲ್ಲಿ ಉಳಿಯಲಿದೆ. 2020ರಲ್ಲಿ ಸೃಷ್ಠಿಯಾದ ಹೆಲ್ತ್ ಎಮೆರ್ಜೆನ್ಸಿ ಪರಿಸ್ಥಿತಿ ಯನ್ನು ಈ ಪುಸ್ತಕದ ಮೂಲಕ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಪ್ರಕಟಿಸಿದೆ.
(ಮೊದಲ ಪುಟದಿಂದ) ನೈಜ ವಿಷಯಗಳನ್ನು ಪುಸ್ತಕ ಆಧರಿಸಿದೆ ಎಂದರು.
ಕೊರೊನಾ ತೊಲಗಿ, ಸಹಜ ಸ್ಥಿತಿಗೆ ದೇಶ ಮರಳಬೇಕು. ಮಾನಸಿಕವಾಗಿ ಧೈರ್ಯವನ್ನು ಅಳವಡಿಸಿಕೊಳ್ಳಿ ಎಂದು ರಾಜೇಂದ್ರ ಕರೆ ನೀಡಿದರು.
ಪ್ರಜಾಸತ್ಯ ಸಂಪಾದಕ ಡಾ.ಬಿ.ಸಿ ನವೀನ್ ಕುಮಾರ್ ಮಾತನಾಡಿ, ಸೃಜನಶೀಲತೆ, ಸಮಾಜಮುಖಿ, ಸಂವೇಧನಶೀಲತೆಯಲ್ಲಿ ಪುಸ್ತಕ ಹೊರಬಂದಿದೆ. ಅಬ್ರಾಹಂ ಲಿಂಕನ್ ಅಮೇರಿಕಾದಲ್ಲಿ ಒಬ್ಬರ ಮನೆಯಲ್ಲಿ ಕಳೆದ 5 ನಿಮಿಷವನ್ನು ಒಂದು ಕೃತಿಯಾಗಿ ಹೊರತಂದಿದ್ದಾರೆ. ಅದು ಅಕ್ಷರಕ್ಕಿರುವ ಶಕ್ತಿಯಾಗಿದೆ. ಪುಸ್ತಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅನುವಾದಗೊಂಡು ಸ್ಥಳೀಯ ವಿಷಯಗಳು ಮುಟ್ಟುವಂತಾಗಲಿ ಎಂದು ಆಶಿಸಿದರು.
ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರತಿಕೂಲ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗೆ ಸಂಘ, ಸಂಸ್ಥೆಗಳು ಸ್ಪಂದಿಸಿವೆ. ಅನಿಲ್ ಎಚ್.ಟಿ ಬರೆದ ಪುಸ್ತಕ ವಸ್ತುನಿಷ್ಟವಾಗಿದೆ. ಕೊರೊನಾ ಸಮಯದಲ್ಲಿ ತ್ವರಿತವಾಗಿ ಸ್ಪಂದಿಸಿದ ವಿಚಾರಗಳು ಪುಸ್ತಕದ ಜೀವಾಳವಾಗಿದೆ ಎಂದು ಹೇಳಿದ ಅವರು, 1995 ರ ಅವಧಿಯಲ್ಲಿ ಪತ್ರಿಕೆಗಳಲ್ಲಿ ಅನಿಲ್ ಎಚ್.ಟಿ ಅವರು ಬರೆದಿರುವ ವೀರಪ್ಪನ್ ವಿಚಾರಗಳನ್ನು ಪುಸ್ತಕವನ್ನಾಗಿ ಪ್ರಕಟಿಸುವಂತಾಗ ಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬರಹಗಾರರನ್ನು ಗುರುತಿಸಿ, ಪೆÇ್ರೀತ್ಸಾಹಿಸುವ ಕೆಲಸವಾಗಬೇಕು. ಹೆಚ್ಚು ಪುಸ್ತಕಗಳು ಅನಿಲ್ ಅವರ ಲೇಖನಿಯಿಂದ ಬರಲಿ ಎಂದು ಆಶಿಸಿದರು.
ಆನ್ಲೈನ್ ಮಾರಾಟಕ್ಕೆ ಚಾಲನೆ ನೀಡಿದ ಕೂರ್ಗ್ ಫ್ಲೇವರ್ಸ್ ಡಾಟ್ ಕಾಂನ ಬಾಲಾಜಿ ಕಶ್ಯಪ್, ಅಂತರಾಷ್ಟ್ರೀಯ ಮಟ್ಟಕ್ಕೂ ಪುಸ್ತಕ ತಲುಪುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಗ್ರೀನ್ ಸಿಟಿ ಫೆÇೀರಂ ಸಂಸ್ಥಾಪಕ ಅಧ್ಯಕ್ಷ ಚಿಯ್ಯಂಡ ಸತ್ಯ, ಮೊದಲ ಪುಸ್ತಕವನ್ನು ಈ ಸಂದರ್ಭ ಖರೀದಿಸಿದರು.
ರೆಡ್ಕ್ರಾಸ್ ಸಭಾಪತಿ ರವೀಂದ್ರ ರೈ, ಹೋಂಸ್ಟೇ ಅಸೋಸಿಯೇಷನ್ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ‘ಶಕ್ತಿ’ ಸಂಪಾದಕ ಚಿದ್ವಿಲಾಸ್, ಸಲಹಾ ಸಂಪಾದಕ ಅನಂತಶಯನ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಗದೀಶ್ ಪ್ರಶಾಂತ್, ವಿಜಯ ವಿನಾಯಕ ದೇವಾಲಯ ಟ್ರಸ್ಟಿ ಮೋಹನ್ ಮೊಣ್ಣಪ್ಪ, ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜೀವನ್ ಕುಶಾಲಪ್ಪ ಸೇರಿದಂತೆ ಇನ್ನಿತರರು ಇದ್ದರು.