ಮಡಿಕೇರಿ, ಜೂ. 30: ವಸತಿ ರಹಿತರಿಗಾಗಿ ಸರ್ಕಾರ ರೂಪಿಸಿರುವ ವಿವಿಧ ವಸತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ಯೋಜನೆಗಳ ಅನುಷ್ಠಾನಕ್ಕೆ ಯಾವದೇ ರೀತಿಯ ಅಡೆತಡೆಗಳಿದ್ದರೂ ಅದನ್ನು ತನ್ನ ಗಮನಕ್ಕೆ ತರಬೇಕು. ತಾನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅವುಗಳನ್ನು (ಮೊದಲ ಪುಟದಿಂದ) ನಿವಾರಿಸುವ ಮೂಲಕ ಅಗತ್ಯ ಸಹಕಾರ ನೀಡುತ್ತೇನೆ ಎಂದು ಹೇಳಿದರು. ವಸತಿ ಸಚಿವರೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದು, ವಸತಿ ಯೋಜನೆಯಡಿ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಅವುಗಳ ವಿಲೇವಾರಿಗೆ ಹಾಗೂ ಬಾಕಿ ಇರುವ ಬಿಲ್ಗಳ ಪಾವತಿಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಶಾಸಕ ರಂಜನ್ ಸೂಚಿಸಿದರು.
ಕೆಲ ಗಿರಿಜನ ಹಾಡಿಗಳಿಗೆ ಸಮರ್ಪಕವಾಗಿ ಆಹಾರ ಪೂರೈಕೆಯಾಗತ್ತಿಲ್ಲ ಎಂದು ಉಸ್ತುವಾರಿ ಸಮಿತಿ ಸದಸ್ಯೆ ವಿಜಯ ಆರೋಪಿಸಿದರು. ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಹಾಡಿಗಳಿಗೆ ಆಹಾರ ಪದಾರ್ಥಗಳ ವಿತರಣೆ ಸಂದರ್ಭ ಸಂಬಂಧಿಸಿದ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ವಿತರಿಸುವ ಮೂಲಕ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿ ಶಿವಕುಮಾರ್ ಅವರಿಗೆ ಸೂಚಿಸಿದರು.
ಬಾಳೆಲೆ ಸೇರಿದಂತೆ ಸುತ್ತಮುತ್ತ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಸಮಿತಿ ಸದಸ್ಯರಾದ ಯಮುನಾ ಚಂಗಪ್ಪ, ಗೋಪಿ ಚಿಣ್ಣಪ್ಪ ಸಭೆಯ ಗಮನ ಸೆಳೆದರು. ಮಡಿಕೇರಿ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್ ಕೂಡ ಚೆಸ್ಕಾಂ ಅಧಿಕಾರಿಗಳು ಸೂಕ್ತ ಸ್ಪಂದನ ನೀಡುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ ಸೆಸ್ಕಾಂನ ಎಲ್ಲಾ ಜೆಇಗಳ ಸಭೆ ಕರೆದು ವಿದ್ಯುತ್ ಸಮಸ್ಯೆ ಬಗ್ಗೆಹರಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರಿಗೆ ಸೂಚನೆ ನೀಡಿದರು.
ಹಲವು ರಸ್ತೆ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಂಜನ್ ಕಾಮಗಾರಿಯ ಗುತ್ತಿಗೆಯನ್ನು ದೂರದ ಊರುಗಳ ಗುತ್ತಿಗೆದಾರರು ಪಡೆದುಕೊಂಡು ನಂತರ ಮತ್ತೊಬ್ಬರಿಗೆ ಉಪಗುತ್ತಿಗೆ ನೀಡುತ್ತಿರುವದರಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ, ಕಳಪೆಯಾಗುತ್ತಿವೆ. ಆದ್ದರಿಂದ ಗುತ್ತಿಗೆ ಪಡೆದ ಗುತ್ತಿಗೆದಾರರು ಉಪ ಗುತ್ತಿಗೆ ನೀಡಲು ಅವಕಾಶ ನೀಡಬಾರದು ಎಂದರು.
ಹಾಡಿಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಸಮನ್ವಯತೆಯೊಂದಿಗೆ ಗ್ರಾಮ ಸಭೆಗಳನ್ನು ನಡೆಸಿ ಕಾರ್ಯೋನ್ಮುಖವಾಗುವಂತೆ ರಂಜನ್ ಸೂಚಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ ಎಂದು ಶಾಸಕ ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು. ವೈದ್ಯಕೀಯ ಕಾಲೇಜಿನ ಡೀನ್ ಅವರಿಂದ ಕೊರೊನಾ ಮುಂಜಾಗ್ರತಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಪ್ರತಾಪ್ ಸಿಂಹ ಉತ್ತಮ ಕೆಲಸ ಮಾಡುತ್ತಿದ್ದೀರಿ ಇದನ್ನು ಮುಂದುವರೆಸಿ ಎಂದರು.
ಸಭೆಯಿಂದ ಹೊರ ನಡೆದ ನವೀನ್ಕುಮಾರ್
ಸಭೆಯ ಕೊನೆಯಲ್ಲಿ ತಮ್ಮ ಅಭಿಪ್ರಾಯಗಳಿದ್ದರೆ, ತಿಳಿಸುವಂತೆ ಸಂಸದ ಪ್ರತಾಪ್ ಸಿಂಹ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಸದಸ್ಯ ಡಾ.ಬಿ.ಸಿ. ನವೀನ್ಕುಮಾರ್ ಅವರಿಗೆ ಹೇಳಿದರು. ಈ ವೇಳೆ ಕೊರೊನಾ ಹೆಚ್ಚಾಗಲು ಕಾರಣವೇನು ಎಂಬ ಬಗ್ಗೆ ಮೊದಲು ಚರ್ಚೆಯಾಗಬೇಕೆಂದು ನವೀನ್ಕುಮಾರ್ ಹೇಳಿದಾಗ, ಕೊರೊನಾ ದೇಶವ್ಯಾಪಿ ಹೆಚ್ಚಾಗಿದ್ದು, ಅದು ಯಾಕೆ ಹೆಚ್ಚಾಗಿದೆ ಎಂಬ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಮೋದಿ, ಟ್ರಂಪ್ರಂತಹ ನಾಯಕರುಗಳು ಚರ್ಚಿಸುತ್ತಾರೆ. ಅದನ್ನು ಇಲ್ಲಿ ಚರ್ಚಿಸುವದು ಬೇಡ ಎಂದು ಪ್ರತಾಪ್ ಸಿಂಹ ಹೇಳಿದರು. ಇದಕ್ಕೆ ಅಸಮಾಧಾನಗೊಂಡ ನವೀನ್ಕುಮಾರ್ ಕೊರೊನಾ ಹೆಚ್ಚಾಗಲು ಕಾರಣವಾದ ನ್ಯೂನತೆಗಳ ಬಗ್ಗೆ ತಾನು ಪಟ್ಟಿಮಾಡಿಕೊಂಡು ಬಂದಿದ್ದೇನೆ. ಅದರ ಬಗ್ಗೆ ಚರ್ಚಿಸಲು ಅವಕಾಶ ನೀಡದೆ ಮೆಡಿಕಲ್ ಕಾಲೇಜಿನ ಡೀನ್ ಅವರಿಗೆ ಒಳ್ಳೆ ಕೆಲಸ ಮಾಡಿದ್ದೀರಾ ಎಂದು ‘ಸರ್ಟಿಫಿಕೇಟ್’ ಕೊಟ್ಟರೆ ಮುಗುದೊಯ್ತೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ನವೀನ್ಕುಮಾರ್ ಸಭೆಯಿಂದ ಹೊರನಡೆದರು. ಈ ಸಂದರ್ಭ ಕೋಪ ಎಲ್ಲರಿಗೂ ಬರುತ್ತೆ ಆದರೆ ಅದು ಸಾತ್ವಿಕವಾಗಿರಬೇಕು ಎಂದು ಹೇಳಿದ ಪ್ರತಾಪ್ ಸಿಂಹ ಸಭೆಯನ್ನು ಮುಂದುವರೆಸಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ವಿದ್ಯುತ್ ಟ್ರಾನ್ಸ್ಫಾರ್ಮಗಳು ಹಾಳಾದರೆ ತ್ವರಿತಗತಿಯಲ್ಲಿ ಬದಲಿಸಿಕೊಡಬೇಕೆಂದು ವಿದ್ಯುತ್ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಸಿಇಓ ಲಕ್ಷ್ಮೀಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಇದ್ದರು.