ಮಡಿಕೇರಿ, ಜೂ. 29: ಮಡಿಕೇರಿಯಲ್ಲಿ ಸಂಜೆ ಬಳಿಕ ಮಳೆಯ ರಭಸ ಹೆಚ್ಚಾಗಿದ್ದು, ರಾತ್ರಿ ವೇಳೆಗೆ ಇಲ್ಲಿನ ಗೌಳಿಬೀದಿಯಲ್ಲಿ ಆವರಣ ಗೋಡೆ ಕುಸಿದು ಬಿದ್ದಿದೆ. ರಾತ್ರಿ 7 ಗಂಟೆಯಿಂದ ಸತತ ಮಳೆ ಸುರಿದಿದ್ದು, 8.30 ರ ವೇಳೆಗೆ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ ಬಳಿಯಿರುವ ಸುರೇಶ್ ಎಂಬವರ ಮನೆಯ ಹಿಂಬದಿಯ ತಡೆಗೋಡೆ ಕುಸಿದು ಬಿದ್ದಿದೆ.ಸುರೇಶ್ ಅವರ ಮನೆಯ ಮೆಟ್ಟಿಲಿಗೆ ಹಾನಿಯಾಗಿದೆ. ಇದೇ ವೇಳೆಯಲ್ಲಿ ಗೌಳಿಬೀದಿಯ ಸುತ್ತಮುತ್ತ ಭೂಮಿ ಕಂಪಿಸಿದ ರೀತಿಯಲ್ಲಿ ಅನುಭವವಾಗಿದ್ದು, ಆಸುಪಾಸಿನ ಮನೆಯವರು ಹೊರಗಡೆ ಬಂದಿದ್ದಾರೆ. ಬಳಿಕ ನೋಡಲಾಗಿ ಆವರಣ ಗೋಡೆ ಕುಸಿದು ಬಿದ್ದಿರುವುದು ಗೋಚರಿಸಿದೆ. ಆದರೆ ಸ್ಥಳೀಯರ ಪ್ರಕಾರ ಭೂಮಿ ನಡುಗಿದ ಅನುಭವವಾದ ಬಳಿಕ ಗೋಡೆ ಕುಸಿದಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ

ಮಾಹಿತಿ ನೀಡಲಾಗಿ ಪೊಲೀಸರು, ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ಅನನ್ಯವಾಸುದೇವ್ ಹಾಗೂ ತಂಡದವರು ಸ್ಥಳಕ್ಕೆ ಭೇಟಿ ನೀಡಿ

ಪರಿಶೀಲಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸುರೇಶ್ ಅವರ ಕುಟುಂಬ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.