ಶ್ರೀಮಂಗಲ, ಜೂ.29 : ಕೃಷಿಯನ್ನೇ ಅವಲಂಬಿಸಿರುವ ರೈತರ ಭೂಮಿಯನ್ನು ಕೃಷಿಯೇತರರು ಖರೀದಿಸಲು ಅವಕಾಶ ಕಲ್ಪಿಸುವ ರಾಜ್ಯ ಸರಕಾರದ ಭೂಸುಧಾರಣಾ ಕಾಯಿದೆ ತಿದ್ದುಪಡಿಯನ್ನು ಸರಕಾರ ಕೈಬಿಡಬೇಕು. ಕೃಷಿಕರೇ ತಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಭೂಸುಧಾರಣಾ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಿ ಜಾರಿಗೊಳಿಸ ಬೇಕೆಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ಸಮಿತಿಯ ಮಾಸಿಕ ಸಭೆಯಲ್ಲಿ ಈ ಕಾಯಿದೆಯ ಬಗ್ಗೆ ಚರ್ಚೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಅವರು ಕೃಷಿಯಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿ ಆರ್ಥಿಕವಾಗಿ ನಷ್ಟದಲ್ಲಿರುವ ರೈತ ಸಮುದಾಯವನ್ನು ವಿಶೇಷ ಪ್ಯಾಕೇಜ್, ಬೆಳೆಗೆ ವೈಜ್ಞಾನಿಕ ಮಾರುಕಟ್ಟೆ ಮೂಲಕ ಪುನಶ್ಚೇತನಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ರೈತ ಸಮುದಾಯಕ್ಕೆ ಆಧಾರವಾಗಿರುವ ಕೃಷಿ ಭೂಮಿಯನ್ನು ಕೃಷಿಯೇತರರು ಕೈಗಾರಿಕೆ ಹಾಗೂ ಇತರ ಕೃಷಿಯೇತರ ಉದ್ದೇಶಕ್ಕೆ ಖರೀದಿಸುವುದರಿಂದ ರೈತ ಬೀದಿಗೆ ಬೀಳುವಂತಾಗುತ್ತದೆ. ಸರಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ರೈತ ಸಮುದಾಯ ಮತ್ತು ರಾಜ್ಯದ ಕೃಷಿ ಕ್ಷೇತ್ರವನ್ನು ಬಲಿಕೊಡಬಾರದೆಂದು ಅವರು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಬಾಚೀರ ಎಸ್. ಕಾರ್ಯಪ್ಪ ಮಾತನಾಡಿ ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆ ಲಾಕ್‍ಡೌನ್ ನಂತರ ಬಹುತೇಕ ಗ್ರಾಮೀಣ ಭಾಗಗಳಿಗೆ ಬಸ್ಸ್ ಸಂಚಾರವಿಲ್ಲದೇ ಕಾರ್ಮಿಕರು, ಬಡವರು ಮತ್ತು ವಾಹನ ರಹಿತರಿಗೆ ತಮ್ಮ ದಿನನಿತ್ಯದ ಸಾಮಗ್ರಿ ಖರೀದಿಗೆ ತೆರಳಲು ಕಷ್ಟವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಈ ಸಂದರ್ಭ ಮನವಿ ಮಾಡಿದರು.

ಈ ಸಂದರ್ಭ ಸಮಿತಿ ಶ್ರೀಮಂಗಲ ಹೋಬಳಿ ಅಧ್ಯಕ್ಷ ಮಾಣೀರ ವಿಜಯನಂಜಪ್ಪ, ನಿರ್ದೇಶಕರುಗಳಾದ ಚೊಟ್ಟೆಯಂಡಮಾಡ ವಿಶ್ವನಾಥ್, ಮಾಣೀರ ಮುತ್ತಪ್ಪ ಹಾಜರಿದ್ದರು.