ಮಡಿಕೇರಿ, ಜೂ. 29: ಜಿಲ್ಲೆಯಲ್ಲಿ ತಾ. 29ರಂದು (ಇಂದು) 3 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಒಟ್ಟು 46 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 3 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯ ಸಕ್ರಿಯ ಪ್ರಕರಣಗಳು 43ಕ್ಕೆ ಏರಿಕೆಯಾಗಿದೆ. 3 ಹೊಸ ಪ್ರಕರಣಗಳ ಪೈಕಿ 1 ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ 1 ನಿಯಂತ್ರಿತ ಪ್ರದೇಶ ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 21 ನಿಯಂತ್ರಿತ ವಲಯಗಳಿವೆ. ಈ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕು ನೆಲ್ಲಿಹುದಿಕೇರಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 32 ವರ್ಷದ ವ್ಯಕ್ತಿಯೊಬ್ಬರಿಗೆ ಹಾಗೂ ವೀರಾಜಪೇಟೆ ತಾಲೂಕು ಪಾಲಿಬೆಟ್ಟ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 27 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈ 2 ಪ್ರಕರಣಗಳ ಸಂಬಂಧ ಯಾವುದೇ ನಿಯಂತ್ರಿತ ಪ್ರದೇಶ ತೆರೆದಿಲ್ಲ. ವೀರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ಗ್ರಾಮದ ಹೊಲಮಾಳ ಪ್ರದೇಶದ ನಿವಾಸಿ, ಬೆಂಗಳೂರಿನಿಂದ ಜಿಲ್ಲೆಗೆ ಹಿಂದಿರುಗಿದ್ದ 37 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಹೊಲಮಾಳದಲ್ಲಿ ಹೊಸದಾಗಿ ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.