ಸೋಮವಾರಪೇಟೆ, ಜೂ.29: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಏರಿಯಾ ಹಿನ್ನೆಲೆ ಇಂದು ನಡೆಯಬೇಕಿದ್ದ ಸೋಮವಾರಪೇಟೆ ಸಂತೆಯನ್ನು ತಹಶೀಲ್ದಾರ್ ಗೋವಿಂದರಾಜು ಅವರು ರದ್ದುಗೊಳಿಸಿದ್ದರಿಂದ ಗ್ರಾಹಕರು ತರಕಾರಿ ಸೇರಿದಂತೆ ಇನ್ನಿತರ ಸಾಮಗ್ರಿಗಳಿಗೆ ಪರದಾಡಿದರು.

ಕಳೆದ ವಾರ ಸಂತೆ ದಿನದಂದು ವ್ಯಾಪಾರಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದರಿಂದ ನೇರವಾಗಿ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರ ಪ್ರಾಥಮಿಕ ಸಂಪರ್ಕ ಹೊಂದಿದ ಇತರ ಈರ್ವರಿಗೂ ಸೋಂಕು ದೃಢಪಟ್ಟಿದ್ದರಿಂದ ಬಳಗುಂದ ಕರ್ಕಳ್ಳಿ ಗ್ರಾಮವನ್ನು ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿ ನಿರ್ಬಂಧ ವಿಧಿಸಲಾಗಿದೆ.ಈ ಹಿನ್ನೆಲೆ ಪಟ್ಟಣಕ್ಕೆ ಸಮೀಪವೇ ಕಂಟೈನ್‍ಮೆಂಟ್ ಏರಿಯಾ ಇರುವದರಿಂದ ಸೋಮವಾರದ ಸಂತೆಯನ್ನು ರದ್ದುಗೊಳಿಸಿ ತಹಶೀಲ್ದಾರ್ ಆದೇಶ ನೀಡಿದ್ದರು. ಈ ಹಿನ್ನೆಲೆ ಇಂದು ಆರ್‍ಎಂಸಿ ಮಾರುಕಟ್ಟೆಯಲ್ಲಿ ಸಂತೆ ನಡೆಯಲಿಲ್ಲ.

ಪಟ್ಟಣದ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡುಬಂದರು. ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಮಂದಿ, ದಿನಸಿ ಸಾಮಗ್ರಿಗಳನ್ನು ಖರೀದಿಸಿದರು. ಸಂತೆ ಇಲ್ಲದ್ದರಿಂದ ತರಕಾರಿಗಳನ್ನು ಖರೀದಿಸಲಾಗದೇ ವಾಪಸ್ ಆದರು.