ಸಿದ್ದಾಪುರ, ಜೂ. 29: ನೆಲ್ಲಿಹುದಿಕೇರಿ ಬೆಟ್ಟದಕಾಡು ಭಾಗದ ನಿರ್ಬಂಧಿತ ಸ್ಥಳದಲ್ಲಿ ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ಈ ಭಾಗದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೊನಾವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಆತನ ಸಂಪರ್ಕದಲ್ಲಿದ್ದ ಮತ್ತೊಬ್ಬನಿಗೆ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಟ್ಟದಕಾಡು ಭಾಗದಲ್ಲಿ ಸಿಲ್‍ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ, ನಿರ್ಬಂಧಿತ ಸ್ಥಳದಿಂದ ಯಾರು ಕೂಡ ಬೇರೆ ಮಾರ್ಗದಲ್ಲಿ ಬರಬಾರದೆಂದು ಎಚ್ಚರಿಕೆಯನ್ನು ನೀಡಲಾಗಿದೆ. ಜಿಲ್ಲಾಡಳಿತದ ಆದೇಶದ ಮೇರೆಗೆ ಈಗಾಗಲೇ ವಿಭಾಗದಲ್ಲಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದ್ದು ಈ ಪ್ರದೇಶದಲ್ಲಿ ವಾಸಿಸುವ ಮನೆಗಳಿಗೆ ವಾರಿಯರ್ಸ್ ತಂಡ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮ

ನೆಲ್ಯಹುದಿಕೇರಿ ಬೆಟ್ಟದಕಾಡು ಭಾಗದಲ್ಲಿ ಇತ್ತೀಚೆಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾ.ಪಂ ವತಿಯಿಂದ ಎಲ್ಲಾ ಮನೆಗಳಿಗೂ ಹಾಗೂ ಸಾರ್ವಜನಿಕ ರಸ್ತೆಗಳಿಗೂ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಅಲ್ಲದೇ ಆ ಭಾಗದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಅಲ್ಲಿನ ನಿವಾಸಿ ಕೆ.ಕೆ ದಿನೇಶ್‍ರವರು ಉಚಿತವಾಗಿ ಹಾಲು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಸೆಫಿಯಾ, ಪಿ.ಡಿ.ಒ. ಅನಿಲ್ ಕುಮಾರ್, ಸದಸ್ಯೆ ಅನೀಫ್ ಹಾಗೂ ಅನ್ನಮ್ಮ ಹಾಜರಿದ್ದರು.