ಕಣಿವೆ, ಜೂ. 29: ಆರಿದ್ರಾ ಮಳೆಯೂ ಕೂಡ ಈ ಬಾರಿ ಕೈ ಕೊಟ್ಟ ಕಾರಣ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ರೈತರು ಕೈಗೊಂಡಿದ್ದ ಜೋಳದ ಬೆಳೆ ನೀರಿಲ್ಲದೇ ಒಣಗುತ್ತಿದೆ. ಅರೆ ನೀರಾವರಿ ಭೂಮಿಯನ್ನು ಹೊಂದಿರುವ ಕುಶಾಲನಗರ ಹೋಬಳಿಯ ಸಿದ್ದಲಿಂಗಪುರ, ತೊರೆನೂರು, ಸೀಗೆಹೊಸೂರು, ಶಿರಂಗಾಲ, ಹೆಬ್ಬಾಲೆ, ಅರಿಶಿಣ ಗುಪ್ಪೆ, ಅಳಿಲುಗುಪ್ಪೆ, ಚಿಕ್ಕ ಅಳುವಾರ, ಅತ್ತೂರು, ಚಿಕ್ಕತ್ತೂರು, ದೊಡ್ಡತ್ತೂರು, ಹಾಗೆಯೇ ಇತ್ತ ಕಾವೇರಿ ನದಿ ದಂಡೆಯ ಚಿಕ್ಕಹೊಸೂರು, ದೊಡ್ಡಹೊಸೂರು, ಕೊಪ್ಪ, ಆವರ್ತಿ ಮೊದಲಾದ ಗ್ರಾಮಗಳ ರೈತಾಪಿಗಳು ಕೈಗೊಂಡಿದ್ದ ಮುಂಗಾರಿನ ಅಲ್ಪಾವಧಿ ಬೆಳೆ ಯಾದ ಜೋಳದ ಬೆಳೆಯನ್ನು ಉಳಿಸಿಕೊಳ್ಳಲು ನಿತ್ಯವೂ ಆಗಸವನ್ನು ನೋಡುತ್ತಾ ಮಳೆ ಸುರಿಸದೇ ಗಾಳಿಯಲ್ಲಿ ತೇಲಿ ಹೋಗುವ ಬರೀ ಮೋಡಗಳನ್ನು ನೋಡಿಕೊಂಡು ಶಪಿಸುವಂತಾಗಿದೆ. ಕಳೆದ ವರ್ಷ ಆರಿದ್ರಾ ಮಳೆ ಉತ್ತಮವಾಗಿ ಸುರಿದ ಕಾರಣ ಜೋಳದ ಬೆಳೆ ಹುಲುಸಾಗಿ ಬೆಳೆದಿತ್ತು. ಆದರೆ ಈ ಬಾರಿಯ ಆರಿದ್ರಾ ಮಳೆ ಈ ಭಾಗದಲ್ಲಿ ಸುರಿಯದ ಕಾರಣ ಜೋಳ ಬಿತ್ತನೆ ಮಾಡಿದ ರೈತರು ತಲೆ ಮೇಲೆ ಕೈ ಇಟ್ಟು ಚಿಂತಿಸುವಂತಾಗಿದೆ. ಈಗಾಗಲೇ ತುಂಡು ಭೂಮಿಯನ್ನೇ ಅಧಿಕವಾಗಿ ಹೊಂದಿರುವ ಸಣ್ಣ ಹಿಡುವಳಿದಾರರು ಮನೆಯಲ್ಲಿನ ಒಡವೆಗಳನ್ನು ಗಿರವಿ ಇಟ್ಟು ತಂದ ಹಣದಿಂದ ಜೋಳದ ಬಿತ್ತನೆ ಮಾಡಿದ್ದರು.
ಆದರೆ ಮುಂದಿನ ಎರಡು ಮೂರು ದಿನಗಳಲ್ಲಿ ಮಳೆ ಬಾರದಿದ್ದರೆ ಮೊಳಕೆಯೊಡೆದು ಮೇಲೆ ಬಂದ ಜೋಳದ ಗಿಡಗಳು ಬಿಸಿಲಿನ ತಾಪ ತಡೆಯಲಾರದೇ ಬಾಡಿ ಹೋಗುತ್ತಿವೆ. ಹೆಚ್ಚು ಭೂಮಿ ಹೊಂದಿರುವ ಭೂ ಹಿಡುವಳಿದಾರರು ತಮ್ಮ ಭೂಮಿಯಲ್ಲಿ ಕೊಳವೆ ಬಾವಿ ಅಳವಡಿಸಿಕೊಂಡು ನೀರನ್ನು ಕೊಳವೆ ಬಾವಿಯಿಂದ ಜೋಳಕ್ಕೆ ಹರಿಸುತ್ತಿದ್ದಾರೆ. ಆದರೆ ನೀರಾವರಿ ಭೂಮಿ ಹೊಂದಿರದ ಬಡ ರೈತರಿಗೆ ವರುಣ ದೇವನೇ ಗತಿ. ಇನ್ನು ಕೆಲವು ಕೃಷಿಕರು ಜೋಳದ ವ್ಯಾಪಾರಿಗಳಿಂದ ಮುಂಗಡವಾಗಿ ಜೋಳದ ಫಸಲು ಕೊಡುವುದಾಗಿ ಸಾಲ ತಂದು ಮೃಗಶಿರಾ ಮಳೆಯಲ್ಲಿ ಜೋಳದ ಬಿತ್ತನೆ ಮಾಡಿದ್ದರು. ಜೂನ್ 7 ರಂದು ಹುಟ್ಟಿದ ಮೃಗಶಿರಾ ಮಳೆ ಈ ಭಾಗದಲ್ಲಿ ಹೆಚ್ಚಾಗಿ ಮಳೆ ಸುರಿಯದಿದ್ದರೂ ಕೂಡ ಬಿಸಿಲಿನ ತಾಪ ಅಷ್ಟೇನು ಇರಲಿಲ್ಲ. ಆದರೆ ಇದೇ ಜೂನ್ 24 ರಂದು ಹುಟ್ಟಿದ ಆರಿದ್ರಾ ಮಳೆ ರೈತರಲ್ಲಿ ಬಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತಾದರೂ ಇದೀಗ ಹದ ಮಳೆಯೇ ಸುರಿಯದ ಕಾರಣ ರೈತರು ಬೇಸತ್ತು ಹೋಗಿದ್ದಾರೆ. ಇದೇ ಅರಿದ್ರಾ ಮಳೆ ಜುಲೈ 4 ರ ವರೆಗೂ ಇರುವುದರಿಂದ ಸರಿಯಾಗಿ ಮಳೆ ಬಂದರೆ ಜೋಳ ಬಿತ್ತನೆ ಉಳಿಯುತ್ತದೆ. ಇಲ್ಲವೇ ಮತ್ತೆ ಬದಲೀ ಬಿತ್ತನೆಗೆ ರೈತರು ಮುಂದಾಗದೇ ಅನ್ಯ ಮಾರ್ಗವಿಲ್ಲ.
-ಕೆ.ಎಸ್. ಮೂರ್ತಿ/ ನಾಗರಾಜಶೆಟ್ಟಿ