ನಾಪೋಕ್ಲು, ಜೂ. 29: ಸಮೀಪದ ಪೇರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮದ ಕಾಫಿ ಬೆಳೆಗಾರರಾದ ಮೂವೇರ ಕುಶಾಲಪ್ಪ, ತೆಕ್ಕಡ ಗಿರಿ ಮತ್ತಿತರರು ಅವಲತ್ತು ಗೊಂಡಿದ್ದಾರೆ. ಇತ್ತೀಚೆಗೆ ಮೂರು ಕಾಡಾನೆಗಳು ತೋಟಕ್ಕೆ ಧಾಳಿ ಮಾಡಿದ್ದು ಕಾಫಿ,ಕಾಳುಮೆಣಸು ಹಾಗೂ ಬಾಳೆಯ ಗಿಡಗಳನ್ನು ಧ್ವಂಸ ಮಾಡಿವೆ. ಧಾಳಿಯಿಂದ ಈ ವರ್ಷದ ಫಸಲು ಮಾತ್ರವಲ್ಲ ಮುಂದಿನ ವರ್ಷದ ಫಸಲಿಗೂ ಧಕ್ಕೆಯಾಗಿದೆ. ನಷ್ಟ ಪರಿಹಾರ ಕೋರಿ ಭಾಗಮಂಡಲ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಆದಷ್ಟು ಬೇಗ ಅರಣ್ಯ ಇಲಾಖೆ ನಷ್ಟ ಪರಿಹಾರವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.