ಸೋಮವಾರಪೇಟೆ, ಜೂ.29: ಕೊರೊನಾ ಆತಂಕದ ನಡುವೆಯೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ಎದುರಿಸುತ್ತಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಧೈರ್ಯ ತುಂಬಿದರು.
ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಾದ ಓಎಲ್ವಿ ಕಾನ್ವೆಂಟ್ ಮತ್ತು ಜೂನಿಯರ್ ಕಾಲೇಜು ಕಟ್ಟಡಕ್ಕೆ ತೆರಳಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದ ಶಾಸಕರು, ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಇಲ್ಲಿನ ಓಎಲ್ವಿ ಕಾನ್ವೆಂಟ್ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಕಂಟೈನ್ಮೆಂಟ್ ಏರಿಯಾದಿಂದ ಬಂದಿರುವ 5 ಮಂದಿ ವಿದ್ಯಾರ್ಥಿಗಳು, ಜ್ವರ, ಶೀತ ಲಕ್ಷಣವಿರುವ 6 ಮಂದಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕಲ್ಪಿಸಿರುವದನ್ನು ಶಾಸಕರು ವೀಕ್ಷಿಸಿದರು.
ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಬಿಸ್ಕೆಟ್, ಕಂಟೈನ್ಮೆಂಟ್ ಏರಿಯಾದಿಂದ ಬಂದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿದರು. ಇದರೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸ್ಯಾನಿಟೈಸರ್, ಜ್ವರ ತಪಾಸಣೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು.
ಈ ಸಂದರ್ಭ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಅವರು, ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಬೆಳಿಗ್ಗೆಯೇ ಮನೆಯಿಂದ ಹೊರಬರುತ್ತಿರುವದರಿಂದ ಹಲವಷ್ಟು ಮಂದಿ ಉಪಾಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಶಾಸಕರು ತಾಲೂಕಿನ 2881 ವಿದ್ಯಾರ್ಥಿಗಳಿಗೆ ಬಿಸ್ಕೆಟ್ ನೀಡುತ್ತಿರುವದು ಶ್ಲಾಘನೀಯ ಎಂದರು.
ತಾಲೂಕಿನಲ್ಲಿ ಒಟ್ಟು 47 ಮಂದಿ ವಿದ್ಯಾರ್ಥಿಗಳು ಕಂಟೈನ್ಮೆಂಟ್ ಏರಿಯಾದಿಂದ ಪರೀಕ್ಷೆಗೆ ಹಾಜರಾಗುತ್ತಿದ್ದು, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶೀತ, ಜ್ವರ ಲಕ್ಷಣಗಳಿರುವ 12 ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.
ನಂತರ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳು ಯಾವದೇ ಆತಂಕವಿಲ್ಲದಂತೆ ಪರೀಕ್ಷೆ ಎದುರಿಸಿ. ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಯ ಬಗ್ಗೆ ಭಯ ಬೇಡ. ಪ್ರತಿದಿನ ಮನೆಯಲ್ಲೇ ಯೋಗಾಸನ ಮಾಡಿ. ಶ್ವಾಸಕೋಶದ ಶಕ್ತಿಯನ್ನು ವೃದ್ಧಿಸುವಂತಹ ಉಸಿರಾಟದ ಪ್ರಾಣಾಯಾಮಗಳನ್ನು ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಇದರೊಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕಿವಿಮಾತು ಹೇಳಿದರು.