ಸಿದ್ದಾಪುರ, ಜೂ. 29: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಂದ ಗ್ರಾ.ಪಂ ಹೆಚ್ಚಿನ ಕಂದಾಯ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಸಿಪಿಐ (ಎಂ) ಪಕ್ಷದ ವತಿಯಿಂದ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ನೇತೃತ್ವ ವಹಿಸಿದ್ದ ಪಕ್ಷದ ಮುಖಂಡ ಪಿ.ಆರ್. ಭರತ್ ಮಾತನಾಡಿ ಗ್ರಾ.ಪಂ. ನಿವಾಸಿಗಳಿಂದ ಮನೆ ಕಂದಾಯವನ್ನು ಪರಿಷ್ಕøತ ಹೆಸರಿನಲ್ಲಿ ಅಧಿಕವಾಗಿ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು. ನೆಲ್ಯಹುದಿಕೇರಿ ಭಾಗದಲ್ಲಿ ಕಳೆದೆರಡು ವರ್ಷಗಳಿಂದ ಪ್ರವಾಹಕ್ಕೆ ಸಿಲುಕಿ ಜನ ಸಂಕಷ್ಟದಲ್ಲಿದ್ದಾರೆ. ಇದಲ್ಲದೆ ಇದೀಗ ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಆದ ಸಂದರ್ಭದಲ್ಲಿ ಬಡ ಜನತೆ ಕಂಗಾಲಾಗಿದ್ದಾರೆ. ಗ್ರಾ.ಪಂ ಸರ್ಕಾರದ ಆದೇಶದ ಪ್ರಕಾರ ಮನೆ ಕಂದಾಯ ಪರಿಷ್ಕøತ ತೆರಿಗೆಯನ್ನು ಬಲತ್ಕಾರವಾಗಿ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದರು. ಮನೆ ಹಾಗೂ ಸಣ್ಣ ಅಂಗಡಿಗಳಿಗೂ ಕಂದಾಯ ಹೆಚ್ಚು ಮಾಡಿದ್ದು, ಇದನ್ನು ಕೂಡಲೇ ಕಡಿಮೆಗೊಳಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ ಸದಸ್ಯ ಮೋಣಪ್ಪ, ಸಿಪಿಐ (ಎಂ) ಪಕ್ಷದ ಪದಾಧಿಕಾರಿಗಳಾದ ಎಂ.ಜಿ ಜೋಸ್, ರವಿ, ಚಂದ್ರನ್, ಬೋಜಿ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಪಕ್ಷದ ವತಿಯಿಂದ ನೆಲ್ಯಹುದಿಕೇರಿ ಗ್ರಾ.ಪಂ ಪಿ.ಡಿ.ಒ. ಅನಿಲ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.