ಕೂಡಿಗೆ, ಜೂ. 28: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ಸಮೀಪದಲ್ಲಿರುವ ಆಟದ ಮೈದಾನದ ಅಭಿವೃದ್ಧಿಗೆ ರೂ 12 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸಿದ್ದರು. ಅದರೆ ಒಂದೂವರೆ ವರ್ಷ ಕಳೆದರೂ ಇನ್ನೂ ಪ್ರಾರಂಭವಾಗದೆ ಆಟದ ಮೈದಾನದ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ. ಅದರಲ್ಲಿ ಈ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಉಪ ರಸ್ತೆ ಮತ್ತು ಚರಂಡಿ, ಕಾಂಕ್ರಿಟ್ ತಡೆಗೊಡೆ, ಸಮುದಾಯ ಭವನಗಳ ಕಾಮಗಾರಿಗಳು ನಡೆದಿವೆ.

ಅದರೆ ಆಟದ ಮೈದಾನ, ಕಸ ವಿಲೇವಾರಿ ಘಟಕ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಇವೆ. ಇದರಲ್ಲಿ ಮುಖ್ಯವಾಗಿ ಹುದುಗೂರು ಗ್ರಾಮಕ್ಕೆ ಯುವಕರ ಒತ್ತಾಯದ ಮೇರೆಗೆ ರೂ. 12. ಲಕ್ಷ ಹಣವನ್ನು ಆಟದ ಮೈದಾನದ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಸಿದ್ಧವಾಗಿದೆ. ಈ ಕಾಮಗಾರಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಕಾಮಗಾರಿಯನ್ನು ಅತಿ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸ್ಥಳೀಯ ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಗಿರೀಶ್ ಸೇರಿದಂತೆ ಸಮಿತಿಯ ಸದಸ್ಯರುಗಳು, ಕ್ರೀಡಾಪಟುಗಳ ಒತ್ತಾಯವಾಗಿದೆ.