ಗೋಣಿಕೊಪ್ಪಲು, ಜೂ. 28: 2018 ಭೂ ಕುಸಿತದಿಂದ ತೊಂದರೆಗೀಡಾದ ಸೋಮವಾರ ಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದ ಗ್ರಾಮಸ್ಥರಿಗೆ ಸರ್ಕಾರ ದಿಂದ ಸಿಗಬೇಕಾದ ಸವಲತ್ತುಗಳ ನೀಡಿಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ಕುಂಬಾರಗಡಿಗೆಯ ಮೈದಾನದಲ್ಲಿ ಸಭೆ ನಡೆಯಿತು.
ಸಭೆಗೆ ಕೊಡಗು ಉಪ ವಿಭಾಗಾಧಿಕಾರಿ, ಜವರೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಆಗಮಿಸಿ ಇಲ್ಲಿಯ ಜನರ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕರಿಸಿದರು. ಸ್ವಾತಂತ್ರ್ಯ ಬಂದು 73 ವರ್ಷ ಕಳೆದರು ಕೊಡಗಿನ ಕುಂಬಾರಗಡಿಗೆ ಗ್ರಾಮದ ಕೆಲವು ರೈತರಿಗೆ ಇನ್ನು ಕೂಡ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳು ಮರಿಚಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಹಾಗೂ ಪದಾಧಿಕಾರಿಗಳು ಈ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಇಲ್ಲಿಯ ಜನರ ನೈಜ ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಈ ಪ್ರದೇಶವು ಜಿಲ್ಲಾ ಕೇಂದ್ರದಿಂದ ಬಾರಿ ದೂರದಲ್ಲಿದ್ದು ಗ್ರಾಮದ ಒಳ ಭಾಗದಲ್ಲಿರುವ ರೈತರ ಮನೆಗೆ ಯಾವುದೇ ರಸ್ತೆ ಸಂಚಾರವಿಲ್ಲದೆ ನಡೆದುಕೊಂಡೆ ತೆರಳಬೇಕಾಗಿದೆ, ಈ ಗ್ರಾಮದಲ್ಲಿ ಬಹುತೇಕ ವಯೋವೃದ್ಧರು ವಾಸಿಸುತ್ತಿದ್ದು ಸರಿಯಾದ ಮೂಲಭೂತ ಸೌಕರ್ಯವಿಲ್ಲದೆ ವರ್ಷಗಳೇ ಉರುಳಿವೆ ರೈತ ಸಂಘದಿಂದ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಇಲ್ಲಿಯ ಸಮಸ್ಯೆಗಳನ್ನು ಜಿಲ್ಲಾಡಳಿತದ ಮುಂದೆ ಇಡಲಾಗಿದೆ. ಹಂತ ಹಂತವಾಗಿ ಇಲ್ಲಿಯ ಸಮಸ್ಯೆಗಳನ್ನು ಬಗೆ ಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಸೋಮವಾರಪೇಟೆ ತಾಲೂಕಿನ ಎಸಿಎಫ್ ನೆಹರೂ ಮಾತನಾಡಿ ಇಲಾಖೆ ವತಿಯಿಂದ ಕೆಲವು ಭಾಗದ ಗ್ರಾಮಗಳಿಗೆ ಸ್ಥಳೀಯ ಹೊಳೆಯ ನೀರನ್ನು ಬಳಕೆ ಮಾಡಿಕೊಂಡು ಟರ್ಬೈನ್ ಮೂಲಕ ವಿದ್ಯುತ್ ಸಂಗ್ರಹಿಸಿ ಸೋಲಾರ್ ಮೂಲಕ ಇಲ್ಲಿಯ ಗ್ರಾಮದ ಜನತೆಗೆ ಉಚಿತವಾಗಿ ವಿದ್ಯುತ್ ನೀಡುವ ಕೆಲಸಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದೆ. ಆದಷ್ಟು ಬೇಗನೆ ಜನತೆಗೆ ಇದರ ಸವಲತ್ತು ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ವನ್ಯ ಪ್ರಾಣಿಗಳಿಂದ ರೈತರ ಗದ್ದೆ ಹಾಗೂ ಭೂಮಿಗಳಿಗೆ ತೊಂದರೆ ಆದ ಸಂದರ್ಭದಲ್ಲಿ ಇಲಾಖೆ ವತಿಯಿಂದ ಪರಿಹಾರ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಸಮಸ್ಯೆ ಎದುರಾದಾಗ ರೈತರ ಕಷ್ಟಗಳಿಗೆ ಇಲಾಖೆಯು ಸ್ಪಂದಿಸಲಿದೆ ಎಂದರು. ಸೋಮವಾರಪೇಟೆ ತಾಲೂಕು ಕೃಷಿ ಅಧಿಕಾರಿ ಮನಸ್ವಿ ಮಾತನಾಡಿ ಇಲಾಖೆಯು ರೈತರ ಅನುಕೂಲಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ. ಈ ಭಾಗದಲ್ಲಿ ಆರ್ಟಿಸಿ ಸಮಸ್ಯೆಯಲ್ಲಿ ಗೊಂದಲವಿರುವುದರಿಂದ ಯಾವುದೇ ಯೋಜನೆಗಳು ಬಂದಲ್ಲಿ ಓರ್ವ ರೈತನಿಗೆ ಮಾತ್ರ ಲಭ್ಯವಾಗುತ್ತದೆ. ತಮ್ಮ ಆರ್ಟಿಸಿಗಳನ್ನು ಬದಲಾಯಿಸಿ ಕೊಂಡು ಸರ್ಕಾರದ ಯೋಜನೆ ಗಳನ್ನು ಪಡೆಯುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಸ್ವಾಗತಿಸಿದರು.ರೈತ ಸಂಘದ ಗ್ರಾಮದ ಸಂಚಾಲಕಿ ಜಯಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರೈತ ಮುಖಂಡರು ಗಳಾದ ಬಾಚಮಾಡ ಭವಿಕುಮಾರ್, ಆಲೇಮಾಡ ಮಂಜುನಾಥ್ ಚೆಪ್ಪುಡೀರ ರೋಷನ್, ರಾಜೇಶ್, ಪೆಮ್ಮಂಡ ಅಯ್ಯಪ್ಪ, ಚೊಟ್ಟೆಕಾಳಪಂಡ ಮನು, ಗಾಣಂಗಡ ಉತ್ತಯ್ಯ, ಕೋದೇಂಗಡ ಬೆನ್ಜ್ನ್, ಮೇಚಂಡ ಕಿಶ, ಪುಚ್ಚಿಮಾಡ ರಾಯ್ ಮಾದಪ್ಪ, ಚಟ್ಟಂಗಡÀ ಕಂಬ ಕಾರ್ಯಪ್ಪ, ಚಟ್ಟಂಗಡ ಸೋಮಣ್ಣ, ತಡಿಯಂಗಡ ಸೋಮಣ್ಣ, ನೂರೇರ ಅರುಣ ಉತ್ತಯ್ಯ, ಕೈಬುಲಿರ ಸುನೀಲ್, ಚೇಮಿರ ಪ್ರಕಾಶ್, ಮಳವಂಡ ಗಿರೀಶ್ ಮಚ್ಚಾರಂಡ ಪ್ರವೀಣ್, ಕೊಕ್ಕೇರ ಅಯ್ಯಣ್ಣ, ಕುಂಬಾರಗಡಿಗೆಯ ಕೆ.ಸಿ. ಮುತ್ತಪ್ಪ, ಎಂ.ಎಂ. ಮುತ್ತಮ್ಮ, ಚೋಂದಮ್ಮ, ಕೆ. ಅಪ್ಪಯ್ಯ, ಎನ್.ಡಿ. ಉತ್ತಯ್ಯ, ಸೇರಿದಂತೆ ಉಪತಹಶೀಲ್ದಾರ್ ಶುಭ, ಗ್ರಾಮ ಲೆಕ್ಕಿಗ ಪ್ರಹ್ಲಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.