ಮಡಿಕೇರಿ, ಜೂ. 27: ಕರ್ನಾಟಕ ಅರಣ್ಯ ಇಲಾಖೆ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಅಧ್ಯಯನದ ಉದ್ದೇಶದಿಂದ ಕ್ಯಾಮರಾ ಟ್ರ್ಯಾಪ್ಗಳನ್ನು ಅಳವಡಿಸುತ್ತದೆ. ಕಾಡಿನಲ್ಲಿ ಹೀಗೆ ಅಳವಡಿಸಲಾದ ಕ್ಯಾಮರಾ ಟ್ರ್ಯಾಪ್ಗಳು ತಮ್ಮೆದುರು ಹಾದುಹೋಗುವ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತವೆ. ನಿಶಾಚರಿ ಪ್ರಾಣಿಗಳ ಅಧ್ಯಯನದ ದೃಷ್ಠಿಯಿಂದ ಈ ಛಾಯಾಚಿತ್ರಗಳು ಅಮೂಲ್ಯ ಮಾಹಿತಿಯನ್ನು ಒದಗಿಸುತ್ತವೆ. ಈ ತಂತ್ರಜ್ಞಾನವನ್ನು ಆಧರಿಸಿ ಇದೀಗ ನಿರ್ದಿಷ್ಟ ಸಂರಕ್ಷಿತ ಪ್ರದೇಶದಲ್ಲಿರುವಂತಹ ಹುಲಿ ಮತ್ತು ಚಿರತೆಗಳನ್ನು ಪ್ರತ್ಯೇಕವಾಗಿ ಗುರುತಿಸುವ, ಅವುಗಳ ಸಾಂದ್ರತೆಯನ್ನು ಅಂದಾಜು ಮಾಡುವ ವೈಜ್ಞಾನಿಕ ಕೆಲಸ ಆಗುತ್ತಿದೆ. ಜಾನುವಾರುಗಳ ಮೇಲೆ ನಿರಂತರ ಧಾಳಿ ಮಾಡುವ ಹುಲಿ, ಚಿರತೆಯನ್ನು ನಿರ್ಧಿಷ್ಟವಾಗಿ ಗುರುತಿಸಲು ಆ ಮೂಲಕ ನಿರ್ಧಿಷ್ಟ ಪ್ರಾಣಿಯನ್ನು ಸೆರೆ ಹಿಡಿಯುವಂತಹ ನಿರ್ಧಾರಕ್ಕೆ ಬರಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ.
ಕಾನೂನು ಬಾಹಿರ ಕೃತ್ಯ ಬೆಳಕಿಗೆ : ಈ ಸಾಲಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಇದೇ ಉದ್ದೇಶಕ್ಕೆ ಬ್ರಹ್ಮಗಿರಿ ಅಭಯಾರಣ್ಯದಲ್ಲಿ ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್ಗಳು ಬೇರೆಯದೇ ಮಾಹಿತಿಯನ್ನು ಬಯಲಿಗೆಳೆದಿವೆ. ಬ್ರಹ್ಮಗಿರಿ ಅಭಯಾರಣ್ಯದ ಅಂಚಿನ ಬಿರುನಾಣಿ ಗ್ರಾಮದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾ ಟ್ರ್ಯಾಪ್ನಲ್ಲಿ ಮನುಷ್ಯರು ರಾತ್ರಿಯ ಹೊತ್ತಿನಲ್ಲಿ ಸಂಚರಿಸಿರುವ ಛಾಯಾಚಿತ್ರಗಳು ದಾಖಲಾಗಿವೆ. ರಾತ್ರಿಯ ಹೊತ್ತಿನಲ್ಲಿ ಅರಣ್ಯದೊಳಗೆ ಜನರಿಗೇನು ಕೆಲಸ ಎಂದೇ ಕ್ಯಾಮರಾಗಳು ಕ್ಲಿಕ್ ಮಾಡಿದಂತಿದೆ!
ಬ್ರಹ್ಮಗಿರಿ ಅಭಯಾರಣ್ಯಕ್ಕೆ ರಾತ್ರಿಯ ವೇಳೆ ಕಾನೂನು ಬಾಹಿರವಾಗಿ ಪ್ರವೇಶಿಸಿದ ವ್ಯಕ್ತಿಗಳ ಬಗ್ಗೆ ಸಾಕ್ಷಿಗಳು ಲಭಿಸಿದರೂ ಈ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಯ ಶ್ರೀಮಂಗಲ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಬಗ್ಗೆ ಹಲವಾರು ವಂದತಿಗಳು ಬಿರುನಾಣಿಯಲ್ಲಿ ಹರಿದಾಡುತ್ತಿವೆ. ಬಡವರ ಸಣ್ಣ ಪುಟ್ಟ ತಪ್ಪುಗಳನ್ನು ಅಪರಾಧವೆಂದು ಬಿಂಬಿಸಿ ಪ್ರಚಾರ ಪಡೆಯುವ ಅರಣ್ಯ ಇಲಾಖೆ ಬಲಾಢ್ಯರ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಕೈಕಟ್ಟಿ ಕುಳಿತಿದೆ ಎಂದು ಜನ ಆರೋಪಿಸಿದ್ದಾರೆ.
ಈ ರೀತಿಯ ಕೃತ್ಯದ ಬಗ್ಗೆ ಸಾಕ್ಷಿ ಸಮೇತ ವರದಿ ಪ್ರಕಟವಾದ ನಂತರವಾದರೂ ಶ್ರೀಮಂಗಲ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಾರೋ ಎಂಬುದನ್ನು ಕಾದುನೋಡಬೇಕು.