ಮಡಿಕೇರಿ, ಜೂ. 26: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಸೀಲ್ಡೌನ್ ಮಾಡಲಾದ ಪ್ರದೇಶಗಳ ಜನತೆಗೆ ಉಚಿತವಾಗಿ ಆಹಾರ ವ್ಯವಸ್ಥೆ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಸೀಲ್ಡೌನ್ ಮಾಡಲಾದ ಪ್ರದೇಶಗಳ ಜನತೆಗೆ ಹತ್ತು ದಿನಕ್ಕೊಮ್ಮೆ ಅಕ್ಕಿ ಬೇಳೆಯನ್ನು ಒಳಗೊಂಡ ಆಹಾರ ಕಿಟ್ಟನ್ನು ವಿತರಿಸಲಾಗುವುದು. ಎರಡು ದಿನಕ್ಕೊಮ್ಮೆ ತರಕಾರಿಗಳನ್ನು ಸರಬರಾಜು ಮಾಡಲಾಗುವುದು. ಇದನ್ನು ಹೊರತುಪಡಿಸಿ ಹೆಚ್ಚುವರಿ ಪದಾರ್ಥಗಳು ಬೇಕಾದರೆ ಸೀಲ್ಡೌನ್ ಪ್ರದೇಶದಿಂದ ಹೊರ ಭಾಗದಲ್ಲಿರುವ ಅಂಗಡಿಗಳನ್ನು ಹೊಂದಾಣಿಕೆ ಮಾಡಿಕೊಂಡು ಪದಾರ್ಥಗಳ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು. ಆದರೆ ಈ ಪದಾರ್ಥಗಳ ಹಣವನ್ನು ಸಂಬಂಧಿಸಿದ ಮನೆಯವರೆ ಭರಿಸಬೇಕು. ಪ್ರಾಕೃತಿಕ ವಿಕೋಪದಡಿ ಸಾಕಷ್ಟು ಅನುದಾನವಿದ್ದು, ಅದನ್ನು ಆಹಾರ ವ್ಯವಸ್ಥೆಗೆ ಬಳಸಿಕೊಳ್ಳಲಾಗುವುದು. ಈಗಾಗಲೇ ಮಳೆ ಹಿನ್ನೆಲೆಯಲ್ಲಿ ಪಂಚಾಯಿತಿ ಹಾಗೂ ನಗರಸಭೆ ಮಟ್ಟದಲ್ಲಿ ನೇಮಕ ಮಾಡಲಾಗಿರುವ ನೋಡೆಲ್ ಅಧಿಕಾರಿಗಳೇ ಸೀಲ್ಡೌನ್ ಪ್ರದೇಶಗಳ ಮೇಲ್ವಿಚಾರಣೆಯನ್ನು ಮಾಡಲಿದ್ದು,
(ಮೊದಲ ಪುಟದಿಂದ) ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಮನ್ವಯತೆಯೊಂದಿಗೆ ಆಹಾರ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಿದೆ. ಮಡಿಕೇರಿ ವ್ಯಾಪ್ತಿಗೆ ನಗರಸಭೆ ಆಹಾರ ಸರಬರಾಜಿನ ಜವಾಬ್ದಾರಿ ನಿರ್ವಹಿಸಲಿದೆ ಎಂದರು.
ಸೀಲ್ಡೌನ್ ಪ್ರದೇಶಗಳಲ್ಲಿರುವ ಜನರಿಗೆ ಔಷಧಿಗಳ ಅಗತ್ಯವಿದ್ದರೆ ಆರೋಗ್ಯ ಇಲಾಖೆಯಲ್ಲಿರುವಂತಹ ಔಷಧಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಒಂದು ವೇಳೆ ಪ್ರತ್ಯೇಕ ಔಷಧಿಗಳ ಅಗತ್ಯವಿದ್ದರೆ ಅವುಗಳನ್ನು ಬೇರೆಡೆಯಿಂದ ತರಸಿಕೊಡಲಾಗುತ್ತದೆ. ಆದರೆ ಅವುಗಳಿಗೆ ಹಣವನ್ನು ಅಗತ್ಯವಿರುವ ಮನೆಯವರೇ ಭರಿಸಬೇಕಾಗುತ್ತದೆ.
ಕೊರೊನಾ ಸೋಂಕು ಸಂಬಂಧ ಯಾವುದೇ ಪ್ರದೇಶಗಳನ್ನು ಸೀಲ್ಡೌನ್ ಮಾಡುವ ಅಗತ್ಯವಿದ್ದರೆ ಕ್ರಮಕೈಗೊಳ್ಳಲು ತಹಶೀಲ್ದಾರ್ಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
30 ಪೊಲೀಸರ ನಿಯೋಜನೆ : ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಸೀಲ್ಡೌನ್ ಆಗಿರುವ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೀಲ್ಡೌನ್ ಆಗಿರುವ ಪ್ರದೇಶಗಳಲ್ಲಿ ಸುಮಾರು 15 ಪ್ರಮುಖ ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತಿಸಿದ್ದು, ಒಂದೊಂದು ಸ್ಥಳಕ್ಕೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಿಗ್ಗೆ 8 ರಿಂದ ರಾತ್ರಿ 8, ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದು, ಸೀಲ್ಡೌನ್ ಪ್ರದೇಶಗಳ ಜನರು ಯಾವುದೇ ಕೋರಿಕೆಗಳಿದ್ದರೂ ಕರ್ತವ್ಯ ನಿರತ ಪೊಲೀಸರಿಗೆ ಮಾಹಿತಿ ನೀಡಿದರೆ ಅದನ್ನು ಸಂಬಂಧಿಸಿದವರಿಗೆ ರವಾನಿಸುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ. ಸೀಲ್ಡೌನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಪೊಲೀಸ್ ಇಲಾಖೆಯಿಂದಲೇ ಆಹಾರ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿವೈಎಸ್ಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಎರಡು ಗ್ರಾಮ ಸೀಲ್ಡೌನ್
ಸೋಮವಾರಪೇಟೆ : ಪಟ್ಟಣಕ್ಕೆ ಸಮೀಪದ ಬಳಗುಂದ ಮತ್ತು ಕರ್ಕಳ್ಳಿ ಗ್ರಾಮದಲ್ಲಿ ಇಬ್ಬರು ಕೋವಿಡ್-19 ಸೋಂಕಿತರು ಕಂಡು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಸಂಪೂರ್ಣವಾಗಿ ಎರಡು ಗ್ರಾಮಗಳನ್ನು ಸೀಲ್ಡೌನ್ ಮಾಡಲಾಯಿತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 3ರ ವಲ್ಲಭಭಾಯಿ ಬಡಾವಣೆಯ 40 ಮನೆಗಳು, ಬಳಗುಂದ ಕರ್ಕಳ್ಳಿ ವ್ಯಾಪ್ತಿಯ 371 ಮನೆಗಳನ್ನು ಕ್ಲಸ್ಟರ್ ಝೋನ್ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು.
ಗ್ರಾಮಗಳನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದ್ದು, ಯಾರೂ ಮನೆಯಿಂದ ಹೊರ ಬರಬಾರದು, ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂದು ತಾಲೂಕು ದಂಡಾಧಿಕಾರಿ ಗೋವಿಂದರಾಜ್ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಮೀರದಂತೆ ಎಚ್ಚರಿಕೆ ನೀಡಲಾಯಿತು.
ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಪ್ರತಿ ಕುಟುಂಬಗಳನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡುವ ಆತಂಕದಿಂದ ಪಟ್ಟಣ ವ್ಯಾಪ್ತಿಯ ಜನ ಸಂದಣಿ ಪ್ರದೇಶ ಸೇರಿದಂತೆ ಸೀಲ್ಡೌನ್ ಪ್ರದೇಶದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಔಷಧಿ ಸಿಂಪಡಿಸಲಾಯಿತು.
ವರಿಷ್ಠಾಧಿಕಾರಿ ಭೇಟಿ : ಸೀಲ್ಡೌನ್ ಆದ ಗ್ರಾಮಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಂಕು ತಡೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಮುಂದಿನ ಆದೇಶದವರೆಗೆ ಯಾರೂ ಸಹ ಗ್ರಾಮವನ್ನು ಬಿಟ್ಟು ಹೊರಹೋಗಬಾರದು ಎಂದು ಸೂಚನೆ ನೀಡಿದರು. ಈ ಸಂದರ್ಭ ಡಿವೈಎಸ್ಪಿ ಶೈಲೇಂದ್ರ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸ್ ಬಂದೋಬಸ್ತ್
ಸೋಮವಾರಪೇಟೆ ಮತ್ತು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ 3 ಕಂಟೈನ್ಮೆಂಟ್ ಏರಿಯಾಗಳಿದ್ದು, ಈಗಾಗಲೇ ಸೀಲ್ಡೌನ್ ಆಗಿರುವ ಹಿನ್ನೆಲೆ ಪೊಲೀಸ್ ಸಿಬ್ಬಂದಿಗಳು ಅಗತ್ಯ ಬಂದೋಬಸ್ತ್ ವ್ಯವಸ್ಥೆಯಲ್ಲಿದ್ದಾರೆ.
ಶನಿವಾರಸಂತೆ ಪೊಲೀಸ್ ಠಾಣೆಗೆ ಒಳಪಡುವ ಆಲೂರುಸಿದ್ದಾಪುರದ ದೊಡ್ಡಳ್ಳಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ಗಂಟೆಯವರೆಗೆ ಈರ್ವರು ಪೊಲೀಸ್ ಪೇದೆಗಳು ಕಂಟೈನ್ಮೆಂಟ್ ಏರಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂಜೆ 6 ಗಂಟೆಯ ನಂತರ ಈ ಭಾಗದಲ್ಲಿ ಕಾಡಾನೆಗಳು ಓಡಾಡುವ ಭಯದಿಂದ ಪೊಲೀಸ್ ಸಿಬ್ಬಂದಿಗಳು ವಾಪಸ್ ಆಗುತ್ತಿದ್ದು, ದಿನದ ಹಗಲಿನ ವೇಳೆಯಲ್ಲಿ ಮಾತ್ರ ಇಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ.
ಇನ್ನು ಹಂಡ್ಲಿ ಸಮೀಪದ ಶಿರಂಗಾಲದಲ್ಲಿ 3 ಪಾಳಿಯಂತೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ಪಾಳಿಯಂತೆ ಈರ್ವರು ಸಿಬ್ಬಂದಿಗಳು ತಲಾ 8 ಗಂಟೆಗಳ ಕಾಲ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣೆಗೆ ಒಳಪಡುವ ಕರ್ಕಳ್ಳಿ ಬಳಗುಂದ ಗ್ರಾಮವೂ ಕಂಟೈನ್ಮೆಂಟ್ ಏರಿಯಾ ಆಗಿದ್ದು, ಇಲ್ಲಿ 3 ಪಾಳಿಯಂತೆ ಬಂದೋಬಸ್ತ್ ಕಲ್ಪಿಸಲಾಗಿದೆ. ಒಂದು ಪಾಳಿಯಲ್ಲಿ ಓರ್ವ ಪೊಲೀಸ್ ಪೇದೆ ಹಾಗೂ ಓರ್ವ ಗೃಹ ರಕ್ಷಕ ದಳದ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾರೆ.
ಬಿಗಿ ಕಾವಲು
ವೀರಾಜಪೇಟೆ : ಬಿಟ್ಟಂಗಾಲದಲ್ಲಿ ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಬಿಟ್ಟಂಗಾಲದಿಂದ ಪೆರುಂಬಾಡಿಗೆ ತೆರಳುವ ಜಂಕ್ಷನ್ ಬಳಿ ಸೀಲ್ಡೌನ್ ಮಾಡಿ ಯಾರೂ ಒಳಗೆ ಹೋಗದಂತೆ ಬ್ಯಾರಿಕೇಡ್ ಹಾಕಿ ಇಬ್ಬರು ಪೊಲೀಸರನ್ನು ಕಾವಲಿರಿಸಲಾಗಿದೆ. ಇದೇ ರಸ್ತೆಯ ಮುಂದಿನ ಭದ್ರಕಾಳಿ ದೇವಸ್ಥಾನದ ಬಳಿ ಮತ್ತೊಂದು ಪಾಯಿಂಟ್ ಗುರುತಿಸಲಾಗಿದ್ದು, ಇಲ್ಲಿಯೂ ಇಬ್ಬರು ಪೊಲೀಸರನ್ನು ಕಾವಲಿರಿಸಲಾಗಿದೆ. ಈ ನಾಲ್ವರ ಉಸ್ತುವಾರಿಗಾಗಿ ಒಬ್ಬ ಎ.ಎಸ್.ಐ.ನ್ನು ನೇಮಕ ಮಾಡಲಾಗಿದೆ.