ಕುಶಾಲನಗರ, ಜೂ 26: ಕುಶಾಲನಗರ ರಥಬೀದಿ ಪ್ರವೇಶದ್ವಾರದಲ್ಲಿ ಔಷಧಿ ವ್ಯಾಪಾರಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನೆÀ್ನಲೆಯಲ್ಲಿ ರಥಬೀದಿ ಉದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ಹಲವು ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ಆಡಳಿತ ಸೋಂಕಿತ ವ್ಯಕ್ತಿಯ ಕಟ್ಟಡದಿಂದ ಮುಂದಿನ ರಸ್ತೆಯನ್ನು ಎರಡು ಕಡೆಗಳಿಂದ ಬಂದ್ ಮಾಡುವುದರೊಂದಿಗೆ ಸೀಲ್‍ಡೌನ್ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲದೆ ಮುಖ್ಯರಸ್ತೆಯಿಂದ ರಥಬೀದಿಗೆ ತೆರಳುವ ಪ್ರವೇಶ ದ್ವಾರದಲ್ಲಿ ಕೋವಿಡ್-19 ಕೇಂದ್ರ ನಿರ್ಮಿಸಿ ನಿಯಮ ಉಲ್ಲಂಘನೆಯಾಗದಂತೆ ನಿಗಾವಹಿಸಲಾಗುತ್ತಿದೆ.
ವಿಪರ್ಯಾಸವೆಂದರೆ ರಥಬೀದಿಯ ರಸ್ತೆಗೆ ಹಲವು ಗಲ್ಲಿ ರಸ್ತೆಗಳು ಸಂಪರ್ಕವಿದ್ದು ಈ ಮೂಲಕ ಜನರು ಓಡಾಟ ನಡೆಸುವ ಸಾಧ್ಯತೆಯಿದೆ. ಒಂದೆಡೆ ರಥಬೀದಿಯ ಬಹುತೇಕ ಕಟ್ಟಡಗಳ ಹಿಂಬಾಗಿಲು ಕುಶಾಲನಗರ ಬೈಪಾಸ್ ರಸ್ತೆ ಅಂಚಿನಲ್ಲಿದ್ದು ಇನ್ನೊಂದೆಡೆ ಕುಶಾಲನಗರ ಆಕ್ಸಿಸ್ ಬ್ಯಾಂಕ್-ಮಾರ್ಕೆಟ್ ರಸ್ತೆ ಮೂಲಕ ಕೂಡ ರಥಬೀದಿಗೆ ನುಸುಳುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ 28 ದಿನಗಳ ಕಾಲ ತಾಲೂಕು ತಹಶೀಲ್ದಾರ್ ಘೋಷಿಸಿರುವ ಸೀಲ್‍ಡೌನ್ ಪ್ರಯೋಜನವಾಗುವ ಸಾಧ್ಯತೆ ಇಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ.
ಕುಶಾಲನಗರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸ್ವಯಂಪ್ರೇರಿತ ಬಂದ್ ಮಾಡಿ ಮನೆಯಲ್ಲೇ ಇರಬೇಕು ಎಂದು ಕುಶಾಲನಗರದ ಉದ್ಯಮಿ ಟಿ.ಆರ್.ಶರವಣಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಕ್ತಿಯೊಂದಿಗೆ ಪ್ರತಿಕ್ರಿಯಿಸಿರುವ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಈ ಬಗ್ಗೆ ಮರು ಪರಿಶೀಲನೆ ನಡೆಸಿ ನಿಯಮಾನುಸಾರ 100 ಮೀ ಸುತ್ತಳತೆ ಪ್ರದೇಶವನ್ನು ನಿಯಂತ್ರಿತ ವಲಯ ಎಂದು ಘೋಷಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೋವಿಡ್-19 ಕೇಂದ್ರದಲ್ಲಿ ಪ್ರಸಕ್ತ ಓರ್ವ ಎಎಸ್‍ಐ ಮತ್ತು ಪೊಲೀಸ್ ಸಿಬ್ಬಂದಿಗಳು, ಹೋಂ ಗಾರ್ಡ್‍ಗಳು ರಸ್ತೆಯನ್ನು ಕಾವಲು ಕಾಯುತ್ತಿರುವ ದೃಶ್ಯ ಕಂಡುಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಅವರು ಕುಶಾಲನಗರಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿ ತೆರಳಿದ್ದಾರೆ.