ಮಡಿಕೇರಿ, ಜೂ. 26: ಭಾರತದ ಗಡಿ ರಕ್ಷಣೆಗಾಗಿ ಸ್ವಾತಂತ್ರ್ಯ ಬಳಿಕ ಸೈನಿಕರು ನಿರಂತರವಾಗಿ ತ್ಯಾಗ - ಬಲಿದಾನಗೈಯ್ಯುತ್ತಿತರುವದು ಅವಿಸ್ಮರಣೀಯ ಎಂದು ನೆನಪಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಪ್ರಸ್ತುತ ಪ್ರಧಾನಿ ಮೋದಿ ನಾಯಕತ್ವದ ಕೇಂದ್ರ ಸರಕಾರ, ಸೈನಿಕರ ಮನೋಸ್ಥೈರ್ಯ ಕುಗ್ಗದಂತೆ ಕಾಳಜಿ ವಹಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ಬಿಜೆಪಿ ಸೈನಿಕ ಪ್ರಕೋಷ್ಠದಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ; ಚೀನಾ ಸೈನಿಕರಿಂದ ಅಮಾನುಷ ರೀತಿ ಹತ್ಯೆಗೈಯ್ಯಲ್ಪಟ್ಟಿರುವ 20 ಭಾರತೀಯ ವೀರ ಸೈನಿಕರ ಬಲಿದಾನಕ್ಕೆ ಶ್ರದ್ಧಾಂಜಲಿಯೊಂದಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಇಂದು ಚೀನಾದಿಂದ ಭಾರತದ ಗಡಿಯಲ್ಲಿ ಕುತಂತ್ರದೊಂದಿಗೆ ಗಾವ್ಹಾನ್ ಪ್ರದೇಶದಲ್ಲಿ ನಂಬಿಕೆದ್ರೋಹ ಸಂದರ್ಭ, ಸೈನಿಕರ ಬಲಿದಾನ ವ್ಯರ್ಥವಾಗದಂತೆ ಶತ್ರುಗಳಿಗೆ ಪಾಠ ಕಲಿಸುವಲ್ಲಿ ಕೇಂದ್ರ ಸರಕಾರ ಮತ್ತು ಸೇನಾ ಮುಖ್ಯಸ್ಥರ ನಿಲುವು ಪ್ರಶಂಸನೀಯ ಎಂದ ಅವರು, ಹಿಂದೆ ಕಾರ್ಗಿಲ್ ಸಮರದಲ್ಲಿ ಪಾಕಿಸ್ತಾನಕ್ಕೆ ಅಂತಹ ಪಾಠ ಕಲಿಸಿದ್ದಾಗಿ ಭಾರತ ಸೇನೆಯ ಗುಣಗಾನ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಇತಿಹಾಸದ ಉದ್ದಕ್ಕೂ ಭಾರತದ ಗಡಿ ರಕ್ಷಣೆಗಾಗಿ ಸೈನಿಕರು ಮಾಡಿರುವ ಶ್ರಮವನ್ನು ಮರೆಯಲು ಸಾಧ್ಯವಿಲ್ಲ ಎಂದರಲ್ಲದೆ, ಇಡೀ ದೇಶದ ಜನಕೋಟಿ ಯೋಧರು ಮತ್ತು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ಕೊಡಗಿನಲ್ಲಿ ಮಾಜಿ ಸೈನಿಕರ ಸಮಸ್ಯೆಗಳಿಗೆ ಸೂಕ್ತ ರೀತಿ ಸ್ಪಂದಿಸುವ ಕಾರ್ಯವನ್ನು ಕೈಗೊಳ್ಳಲಾಗುವದು ಎಂದು ಅವರು ಭರವಸೆ ನೀಡಿದರು.

ಸೈನಿಕ ಪ್ರಕೋಷ್ಠ ಸಂಚಾಲಕ ಹಾಗೂ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಚೀನಾ ಎಸಗಿದ ಪೈಶಾಚಿಕ ಕೃತ್ಯಕ್ಕೆ ಭಾರತ ಸೇನೆ ತಕ್ಕ ಉತ್ತರ ನೀಡಿದ್ದರೂ, ಶತ್ರುದೇಶದ ದುಷ್ಕøತ್ಯ ನಂಬಿಕೆದ್ರೋಹದಾಗಿದೆ ಎಂದು ಗಂಭೀರ ಆರೋಪಿಸಿದರು.

ಇಂತಹ ಸನ್ನಿವೇಶದಲ್ಲಿ ಭಾರತದ ಸೇನೆ ಮತ್ತು ಬಲಿದಾನ, 20 ಸೈನಿಕರ ತ್ಯಾಗವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವೆಂದು ನೆನಪಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಸೈನಿಕ ಪ್ರಕೋಷ್ಠ ಪದಾಧಿಕಾರಿಗಳಾದ ನಂಜುಂಡ, ಕರುಂಬಯ್ಯ, ನಾಚಪ್ಪ, ಈರಪ್ಪ, ಮಾದಪ್ಪ, ನಂದಾ, ಶಂಭು, ಮೊಣ್ಣಪ್ಪ, ನಾಣಯ್ಯ ಸೇರಿದಂತೆ ಪಕ್ಷದ ಪದಾಧಿಕಾರಿಗಳಾದ ಕೆ.ಎಂ. ಅಪ್ಪಣ್ಣ, ಅನಿತಾ ಪೂವಯ್ಯ, ನವೀನ್ ಪೂಜಾರಿ, ವಕೀಲ ಕೃಷ್ಣಮೂರ್ತಿ ಮೊದಲಾದವರು ಪಾಲ್ಗೊಂಡು ಹುತಾತ್ಮ ಯೋಧರಿಗೆ ನಮಿಸಿದರು.