ವೀರಾಜಪೇಟೆ, ಜೂ. 26 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಥರ್ಮಲ್ ಸ್ಕ್ರೀನ್‍ಗೊಳಗಾದ 40 ಮಂದಿಯ ಗಂಟಲು ದ್ರವವನ್ನು ಕೊರೊನಾ ವೈರಸ್ ಪತ್ತೆಗಾಗಿ ಮಡಿಕೇರಿ ಹಾಗೂ ಮೈಸೂರಿಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.

ವೀರಾಜಪೇಟೆ ಬಳಿಯ ಬಿಟ್ಟಂಗಾಲದಲ್ಲಿ ವೃದ್ಧ ಮಹಿಳೆಗೆ ಕೊರೊನಾ ವೈರಸ್ ಸೋಂಕು ತಗಲಿದ್ದರಿಂದ ವೃದ್ಧೆಯ ಸಂಪರ್ಕದಲ್ಲಿದ್ದ ಎಲ್ಲರ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಬೇಕಾಗಿರುವುದರಿಂದ ಶಂಕಿತರ ದ್ರವವನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಿ ಕೊಡಲಾಗಿದ್ದು ಇದರಲ್ಲಿ ಸ್ವತ: ವೈದ್ಯರು, ಶುಶ್ರೂಷಕಿಯರು ಸೇರಿದ್ದು ವರದಿಗೆ ಕಾಯಬೇಕಾಗಿದೆ. ಇಲ್ಲಿನ ಆಸ್ಪತ್ರೆಯ ಕ್ಲಿನಿಕ್ ಘಟಕದಲ್ಲಿ ನಿನ್ನೆ ದಿನ ಫೀವರ್ ತಪಾಸಣೆ ಮಾಡಿದ 30 ಹಾಗೂ ಇಂದಿನ 30 ಮಂದಿ ಸೇರಿದಂತೆ ಒಟ್ಟು 60 ಮಂದಿ ಪೈಕಿ 40 ಮಂದಿಯ ಗಂಟಲು ದ್ರವವನ್ನು ತಪಾಸಣೆಗೆ ಕಳಿಸಲಾಗಿದೆ.

ವೀರಾಜಪೇಟೆ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸಂಬಂಧದಲ್ಲಿ ಮೂರು ತಿಂಗಳ ಹಿಂದೆಯೇ ಪ್ರತ್ಯೇಕವಾಗಿ ಫೀವರ್ ತಪಾಸಣೆ ಘಟಕ ಆರಂಭಿಸಲಾಗಿದ್ದು ಈ ತನಕ ಘಟಕದಲ್ಲಿ ಸುಮಾರು 1657 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ ಸುಮಾರು 309 ಮಂದಿಯ ದ್ರವವನ್ನು ತಪಾಸಣೆಗೆ ಕಳಿಸಲಾಗಿದ್ದು ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಆಸ್ಪತ್ರೆಯಲ್ಲಿ ಫೀವರ್ ಕ್ಲಿನಿಕ್ ಘಟಕ ಮುಂದುವರೆಯಲಿದ್ದು ಇದಕ್ಕಾಗಿ ಪ್ರತ್ಯೇಕ ವೈದ್ಯರು ಶುಶ್ರೂಷಕಿಯರನ್ನು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿರುವುದಾಗಿ ಡಾ: ಸಿಂಪಿ ತಿಳಿಸಿದರು.

ವೀರಾಜಪೇಟೆ ಬಳಿಯ ಬಿಟ್ಟಂಗಾಲದಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದರಿಂದ ನಿನ್ನೆ ಹಾಗೂ ಇಂದು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕ್ಷೀಣಿತಗೊಂಡಿದೆ.