ಮಡಿಕೇರಿ, ಜೂ. 26: ತಾ. 24 ರಂದು ಕೊಡಗು ಜಿಲ್ಲೆಯಲ್ಲಿ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುತ್ತದೆ. ಆ ವೈದ್ಯರು ಮಡಿಕೇರಿ ನಗರದ ಓಂಕಾರೇಶ್ವರ ರಸ್ತೆಯಲ್ಲಿ ಮಡಿಕೇರಿ ಹೆಲ್ತ್‍ಕೇರ್ ಸೆಂಟರ್ (ಮಡಿಕೇರಿ ಸ್ಕ್ಯಾನಿಂಗ್ ಅಂಡ್ ಡಯೋಗ್ನೋಸ್ಟಿಕ್ ಸೆಂಟರ್) ಹೆಸರಿನಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ ಮತ್ತು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ಆ ವೈದ್ಯರು ನಡೆಸುತ್ತಿರುವ ಖಾಸಗಿ ಕ್ಲಿನಿಕ್‍ನಲ್ಲಿ ಮತ್ತು ಆ ವೈದ್ಯರಿಂದ ಜಿಲ್ಲಾ ಆಸ್ಪತ್ರೆ, ಮಡಿಕೇರಿಯಲ್ಲಿ ಚಿಕಿತ್ಸೆ ಪಡೆದವರು ತಾ. 10.06.2020 ಮತ್ತು ಅದರ ನಂತರದ ದಿನಾಂಕಗಳಲ್ಲಿ ಚಿಕಿತ್ಸೆ ಪಡೆದವರು, ತಾವು ಚಿಕಿತ್ಸೆ ಪಡೆದ ದಿನಾಂಕದಿಂದ 14 ದಿನಗಳ ಕಾಲ ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿರಲು ಕೋರಿದೆ. ಅಲ್ಲದೆ ತಾವು ಚಿಕಿತ್ಸೆ ಪಡೆದ ದಿನಾಂಕದಿಂದ 10 ದಿನಗಳೊಳಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದು ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗಾಗಿ ನೀಡಲು ಕೋರಿದೆ. ಆ ಅವಧಿಯೊಳಗೆ ಏನಾದರೂ ಕೊರೊನಾ ಸಂಬಂಧಿತ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.