ರಾಜ್ಯದಲ್ಲಿ ಲಾಕ್‍ಡೌನ್ ಮಾಡಲ್ಲ

ಬೆಂಗಳೂರು, ಜೂ. 26: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್‍ಡೌನ್ ಮಾಡುವುದಿಲ್ಲ. ಕೊರೊನಾ ತಡೆಗೆ ಎಲ್ಲರ ಸಹಕಾರ ಅಗತ್ಯ. ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಶಾಸಕರು ಅವರವರ ಕ್ಷೇತ್ರಗಳತ್ತ ಗಮನಹರಿಸುವ ಅಗತ್ಯವಿದೆ. ಇಂದು ಬೆಂಗಳೂರು ನಗರದ ಶಾಸಕರ ಸಭೆ ಕರೆಯಲಾಗಿದೆ. ನಗರದಲ್ಲಿ ಕೊರೊನಾ ನಿಯಂತ್ರಿಸುವ ಸಂಬಂಧ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾಗೆ ಒಂದೇ ದಿನ 10 ಬಲಿ

ಬೆಂಗಳೂರು, ಜೂ. 26: ರಾಜ್ಯದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ 10 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 180ಕ್ಕೇ ಏರಿಕೆಯಾಗಿದೆ. ಕೊರೊನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಎಂಬಂತೆ 81 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 445 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11005ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಶುಕ್ರವಾರ 246 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 6916ಕ್ಕೇ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 3905 ಸಕ್ರಿಯ ಪ್ರಕರಣಗಳಿದ್ದು, 178 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೂ. 4 ಕೋಟಿ ಮೌಲ್ಯದ ಚೀನಾ ಸರಕು ವಶ

ಬೆಂಗಳೂರು, ಜೂ. 26: ಚೀನಾದ ವುಹಾನ್ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಉದ್ಯಮದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಗೋದಾಮಿನಿಂದ ಬರೋಬ್ಬರಿ ರೂ. 4 ಕೋಟಿ ಮೌಲ್ಯದ ಚೀನಾ ಸರಕುಗಳನ್ನು ವಶಕ್ಕೆ ಪಡೆದಿದ್ದಾರೆ. ಚೀನಾ ವ್ಯಕ್ತಿಗೆ ಸಂಬಂಧಿಸಿದ 60 ಜಿಎಸ್‍ಟಿ ನೋಂದಣಿಗಳನ್ನು ಹೊಂದಿದ್ದ ಸಂಸ್ಥೆಗಳ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 25,446 ಚೀನಾ ಉತ್ಪಾದಿತ ಎಲೆಕ್ಟ್ರಾನಿಕ್ ಹಾಗೂ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ದಾಳಿ ನಡೆದಿದೆ. ಭೋಗ್ಯಕ್ಕೆ ಪಡೆದ ಪ್ರದೇಶದಲ್ಲಿ ವ್ಯಕ್ತಿಯೋರ್ವ ಜಿಎಸ್‍ಟಿ ಕಾಯ್ದೆಯಡಿ ಕೇಂದ್ರ ಹಾಗೂ ರಾಜ್ಯದ ವ್ಯಾಪ್ತಿಯಲ್ಲಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಚೀನಾ ಉತ್ಪಾದಿತ ಸರಕುಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಲು 60 ಸಂಸ್ಥೆಗಳ ನೋಂದಣಿಗಳನ್ನು ಮಾಡಿಸಿದ್ದ. ಆದರೆ ಈ ಪೈಕಿ ಹಲವು ಸಂಸ್ಥೆಗಳ ನೋಂದಣಿ ಅಕ್ರಮವಾಗಿದ್ದದ್ದು ಬೆಳಕಿಗೆ ಬಂದಿದೆ.

ಓರ್ವ ಸಿಆರ್‍ಪಿಎಫ್ ಯೋಧ ಹುತಾತ್ಮ

ಶ್ರೀನಗರ, ಜೂ. 26: ಜಮ್ಮು ಮತ್ತು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಿಆರ್‍ಪಿಎಫ್ ಯೋಧ ಹುತಾತ್ಮನಾಗಿ ಅಪ್ರಾಪ್ತ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಇಂದು ಮಧ್ಯಾಹ್ನ 12.10 ರ ಸುಮಾರಿಗೆ ದಕ್ಷಿಣ ಕಾಶ್ಮೀರದ ಬಿಜ್ಬೆಹರಾ ಪ್ರದೇಶದಲ್ಲಿರುವ ಪಾಡ್‍ಶಾಹಿ ಬಾಗ್ ಸೇತುವೆ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 90 ಬೆಟಾಲಿಯನ್ ಪಡೆದ ಸಿಆರ್‍ಪಿಎಫ್ ಯೋಧ ರೊಬ್ಬರು ಹಾಗೂ ನಾಲ್ಕು ವರ್ಷದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ಭದ್ರತಾ ಪಡೆಗಳು ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ.

ಎನ್‍ಕೌಂಟರ್‍ನಲ್ಲಿ 3 ಉಗ್ರರು ಬಲಿ

ಶ್ರೀನಗರ ಜೂ. 26: ದಕ್ಷಿಣ ಕಾಶ್ಮೀರ ಜಿಲ್ಲೆಯ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಗುರುವಾರ ಸಂಜೆ ಆರಂಭಿಸಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿರುವಾಗ, ಅಲ್ಲಿ ಅಡಗಿದ್ದ ಉಗ್ರರು ಗುಂಡು ಹಾರಿಸಿದರು. ಪ್ರತಿಯಾಗಿ ಭದ್ರತಾ ಪಡೆಗಳು ಪ್ರತೀಕಾರ ತೀರಿಸಿಕೊಂಡವು. ಜಮ್ಮು ಕಾಶ್ಮೀರ ಪೊಲೀಸ್, ಸಿಆರ್‍ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್‍ನ ವಿಶೇಷ ಕಾರ್ಯಪಡೆಯ ಯೋಧರು ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ. ಸುಮಾರು ಹತ್ತು ನಿಮಿಷಗಳ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಹತ್ತಿರದ ಮನೆಗಳಲ್ಲಿನ ಎಲ್ಲಾ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ನಾಯಿಗಳ ದಾಳಿಗೆ 10 ಜಿಂಕೆಗಳು ಬಲಿ

ಮಂಗಳೂರು, ಜೂ. 26: ಮಂಗಳೂರಿನ ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿದ್ದ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ 10 ಜಿಂಕೆಗಳು ಸಾವನ್ನಪ್ಪಿದ ಧಾರುಣ ಘಟನೆ ಗುರುವಾರ ರಾತ್ರಿ ನಡೆದಿದೆ. ಮಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಪ್ರಾಣಿ ಸಂಗ್ರಹಾಲಯದ ಕಾಂಪೌಂಡ್ ಗೋಡೆ ಕುಸಿದುಬಿದ್ದ ಪರಿಣಾಮ ಪ್ರಾಣಿ ಸಂಗ್ರಹಾಲಯದ ಒಳಗೆ ನುಗ್ಗಿದ 5 ಬೀದಿ ನಾಯಿಗಳು, ಜಿಂಕೆಗಳ ಮೇಲೆ ದಾಳಿ ಮಾಡಿವೆ ಎಂದು ಪಿಲಿಕುಳ ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಸಿಡಿಲಬ್ಬರಕ್ಕೆ ಸಾವಿಗೀಡಾದವರ ಸಂಖ್ಯೆ 92

ಪಾಟ್ನಾ, ಜೂ. 26: ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಸಿಡಿಲಿಗೆ ಸಾವಿಗೀಡಾದವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ ಎಂದು ಬಿಹಾರ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ), ಸಿಡಿಲಿಗೆ ಬಲಿಯಾದವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ. ಬಿಹಾರದ ಗೋಪಾಲ್‍ಗಂಜ್, ಮಧುಬನಿ ಮತ್ತು ನವಾಡಾ, ಬಾಗಲ್‍ಪುರ, ಸಿವಾನ್, ದರ್ಬಂಗಾ, ಬಂಕಾ, ಪೂರ್ವ ಚಂಪಾರನ್, ಖಗರಿಯಾ, ಔರಂಗಾಬಾದ್, ಪಶ್ಚಿಮ ಚಂಪಾರನ್, ಕಿಶನ್‍ಗಂಜ್, ಜಮುಯಿ, ಜಹಾನಾಬಾದ್, ಪೂರ್ಣಿಯಾ, ಸುಪಾಲ್, ಬಕ್ಸಾರ್, ಕೈಮೂರ್, ಸಮಸ್ತಿಪುರ, ಶಿವಹಾರ್, ಸರನ್, ಸೀತಮಾರ್ಹಿ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಸಾವುನೋವು ಸಂಭವಿಸಿದೆ ಎಂದು ತಿಳಿದುಬಂದಿದೆ. ಸಿಡಿಲು ಬಡಿದು ಸಾವನ್ನಪ್ಪಿದವರ ಪೈಕಿ ಹೆಚ್ಚಿನ ಮಂದಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಡಿಎಂಡಿ ಮಾಹಿತಿ ನೀಡಿದೆ. ಗುಡುಗು ಮತ್ತು ಮಿಂಚಿನೊಂದಿಗೆ ಭಾರಿ ಮಳೆಯು ರಾಜ್ಯದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮೊದಲೇ ಬಿಹಾರದ ವಿವಿಧ ಭಾಗಗಳಲ್ಲಿ ಸಂಭವಿಸಿದೆ.