ಶನಿವಾರಸಂತೆ, ಜೂ. 24: ಶನಿವಾರಸಂತೆ ಸಮೀಪದ ಗುಂಡೂರಾವ್ ಬಡಾವಣೆ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಇದ್ದಂತಹ ಹಣ್ಣಿನ ವ್ಯಾಪಾರಿ (ಜಿಲ್ಲೆಯ 5ನೇ ಸೋಂಕಿತ) ಬಂದು ಓಡಾಡಿದ ಮಾಹಿತಿಯ ಮೇರೆಗೆ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್, ಆಡಳಿತ ಮಂಡಳಿ ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆಯರು ಮಂಗಳವಾರ ಸಂಜೆ ಗುಂಡೂರಾವ್ ಬಡಾವಣೆಗೆ ಭೇಟಿ ನೀಡಿದರು.
ಬಡಾವಣೆಯಲ್ಲಿ ಸೋಂಕಿತರು ಓಡಾಡಿದ ಸ್ಥಳದ ಬಗ್ಗೆ ಮಾಹಿತಿ ಪಡೆದರು. ಸೋಂಕಿತನ ಸಂಪರ್ಕದಲ್ಲಿದ್ದ 4 ಮಂದಿಯನ್ನು ಗಂಟಲು ದ್ರವ ಪರೀಕ್ಷೆಗಾಗಿ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಯಿತು.
ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿ, 2 ಗಂಟೆಯಿಂದ ಜಾಸ್ತಿ ಸಮಯ ಗುಂಡೂರಾವ್ ಬಡಾವಣೆಯಲ್ಲಿ ತಂಗಿದ್ದ ಬಗ್ಗೆ ಖಚಿತ ಮಾಹಿತಿ ತಿಳಿಯದ ಕಾರಣ ಗುಂಡೂರಾವ್ ಬಡಾವಣೆಯನ್ನು ಸೀಲ್‍ಡೌನ್ ಮಾಡುವುದು ಬೇಡ. ಸೋಂಕಿತರ ಸಂಪರ್ಕ ಹೊಂದಿದ್ದವರು ಇದ್ದರೆ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲು ತಹಶೀಲ್ದಾರ್ ಹಾಗೂ ಆರೋಗ್ಯಾಧಿಕಾರಿಯವರು ಸೂಚಿಸಿದರು.
ಈಗಾಗಲೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಔಷಧಿ ಸಿಂಪಡಿಸುತಿದ್ದು, ವಿಶೇಷವಾಗಿ ಗುಂಡೂರಾವ್ ಬಡಾವಣೆಯಲ್ಲಿ ಪುನಃ ಔಷಧಿ ಸಿಂಪಡಿಸಲಾಗುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ತಿಳಿಸಿದರು.