ಸಿದ್ದಾಪುರ, ಜೂ. 24: ಮರವೊಂದು ಮನೆಯ ಮೇಲೆ ಬಿದ್ದು ಮನೆಯೊಂದಿಗೆ ಮನೆಯೊಡತಿಯನ್ನು ಕಳೆದುಕೊಂಡ ಕುಟುಂಬವೊಂದಕ್ಕೆ ಮುಸ್ಲಿಂ ವೆಲ್ಪೇರ್ ಸೊಸೈಟಿ ಕತಾರ್ ಕುಟ್ಯಾಡಿ ಹಾಗೂ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ಸಿದ್ದಾಪುರ ಸಂಘಟನೆಗಳ ವತಿಯಿಂದ ಹೊಸ ಮನೆ ನಿರ್ಮಿಸಿ ಇಂದು ಹಸ್ತಾಂತರಿಸಲಾಯಿತು.

ಜಮಾಯತ್ ಹಿಂದ್ ಮುಸ್ಲಿಂ ಸಂಘಟನೆ ಮುಖ್ಯಸ್ಥ ಅಬ್ದು ಸಲಾಂ ಮನೆಯನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದರು. ನಂತರ ಮಾತನಾಡಿದ ಅವರು ನಮ್ಮ ಸಂಘಟನೆಗಳು ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡಿರುತ್ತದೆ. ಬಡ ಜನರ ಸಮಸ್ಯೆಗೆ ಸ್ಪಂದಿಸುತ್ತಿದೆ. ತಿತಿಮತಿಯ ತಾರಿಕಟ್ಟೆ ನಿವಾಸಿ ನೌಶಾದ್ ತನ್ನ ಪತ್ನಿ ಹಾಗೂ ಮನೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಅರಿತ ನಮ್ಮ ಸಂಘಟನೆ ಮನೆ ನಿರ್ಮಾಣ ಮಾಡಿ ಸಮಸ್ಯೆಗೆ ಸಿಲುಕಿದ್ದ ಅವರ ಕುಟುಂಬಕ್ಕೆ ಸ್ಪಂದಿಸಿದೆ ಎಂದರು. ಈಗಾಗಲೇ ಜಮಾಯತ್ ಹಿಂದ್ ಸಂಘಟನೆಗಳ ಅಂಗ ಸಂಘಟನೆಗಳು ಸಂತ್ರಸ್ತರ ಸಮಸ್ಯೆಗಳಿಗೆ ಕಳೆದೆರಡು ವರ್ಷಗಳಿಂದ ಸ್ಪಂದಿಸುತ್ತಿದ್ದು, ಅರ್ಹ ಬಡ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್.ಆರ್.ಎಸ್. ಸಂಘಟನೆಯ ಪ್ರಮುಖ ಅಶ್ರಫ್, ಕಾಫಿ ಬೆಳೆಗಾರ ರಾಜು, ಇನ್ನಿತರರು ಹಾಜರಿದ್ದರು.