ಮಡಿಕೇರಿ, ಜೂ. 24: ಕೊಡಗು ಜಿಲ್ಲೆಯಲ್ಲಿ ಮಹಿಳಾ ಮೀನುಗಾರರ ಸ್ವಸಹಾಯ ಸಂಘ ರಚಿಸಿ ಮೀನುಗಾರಿಕೆಗೆ ಮುಂದಾದರೆ ಸರ್ಕಾರದಿಂದ ಶೂನ್ಯ ಬಡ್ಡಿಯಲ್ಲಿ ಸಾಲಸೌಲಭ್ಯ ಒದಗಿಸಲಾಗುವುದು ಎಂದು ಮುಜರಾಯಿ ಹಾಗೂ ಮೀನುಗಾರಿಕಾ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿ.ಪಂ. ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಮತ್ಸ್ಯ ದರ್ಶಿನಿ ಹೊಟೇಲ್ ಪ್ರಾರಂಭಿಸುವ ಸಂಬಂಧ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಿಲ್ಲೆಯಲ್ಲಿ ಮೀನುಗಾರಿಕಾ ಕೇಂದ್ರ ಸ್ಥಾಪನೆಗೂ ಕ್ರಮಕೈಗೊಳ್ಳಲಾಗುವುದು. ಹಾರಂಗಿಯಲ್ಲಿ ವಾರ್ಷಿಕವಾಗಿ 21 ಲಕ್ಷ ಮೀನುಮರಿಗಳನ್ನು ಉತ್ಪಾದಿಸ ಲಾಗುತ್ತಿದ್ದು, ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ 40 ರಿಂದ 50 ಲಕ್ಷದಷ್ಟು ಮೀನುಗಳನ್ನು ಇನ್ನೊಂದು ವರ್ಷದಲ್ಲಿ ಉತ್ಪಾದಿಸಲು
(ಮೊದಲ ಪುಟದಿಂದ) ಅಗತ್ಯ ಕ್ರಮವಹಿಸಲಾಗುವುದು. ಮೀನು ಮಾರಾಟ ಮಾಡಲು ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಮಾರು 1 ಸಾವಿರ ದ್ವಿಚಕ್ರ ವಾಹನಗಳನ್ನು ಶೇ. 50 ರಷ್ಟು ಸಬ್ಸಿಡಿಯೊಂದಿಗೆ ವಿತರಿಸಲಾ ಗುವುದು. ಸ್ವಯಂ ಮೀನುಗಾರಿಕೆ ಮಾಡುವವರಿಗೆ 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುವು ದೆಂದರು.
ಲಾಕ್‍ಡೌನ್‍ನಿಂದಾಗಿ ರಾಜ್ಯದ ದೇವಾಲಯಗಳಿಗೆ ಶೇ. 30 ರಷ್ಟು ಆದಾಯ ಕುಸಿದಿದೆ. ಜಿಲ್ಲೆಯ ಹಲವು ದೇವಾಲಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಕೆಲವೆಡೆ ಅನುದಾನದ ಕೊರತೆ ಇರುವುದಾಗಿ ಗಮನಕ್ಕೆ ಬಂದಿದ್ದು, ಈ ಸಂಬಂಧ ಕ್ರಮವಹಿಸಲಿದ್ದೇನೆ. ಕಾವೇರಿ ಕ್ಷೇತ್ರದಲ್ಲಿ ಯಾತ್ರಿ ನಿವಾಸ ನಿರ್ಮಾಣ ಸಂಬಂಧ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆದು ಮುಂದಡಿಯಿಡಲಾಗುವುದು ಎಂದರು. ಈ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಇದ್ದರು.