ಕೊರೊನಾ ಮಹಾಮಾರಿ ತಾಂಡವಿಸಿದ ಲಾಕ್‍ಡೌನ್‍ನಿಂದಾಗಿ ರೈತ ಸಮೂಹ ತಾವು ಬೆಳೆದ ಬೆಳೆಗೆ ಪೂರಕ ಬೆಲೆ ಸಿಗದೇ ಕಂಗಾಲಾಗಿ ಹೋಗಿದ್ದರು. ಆದಾಗ್ಯೂ ಕೆಲವು ರೈತರು ಧೃತಿಗೆಡದೆ ನಷ್ಟ ತಂದ ಹೂಕೋಸು, ಎಲೆಕೋಸು, ಸಿಹಿಗೆಣಸು ಮೊದಲಾದ ತರಕಾರಿ ಕಾಯಿ ಪಲ್ಯೆಗಳನ್ನು ಹೊರತಾಗಿಸಿ ಧೈರ್ಯ ತೋರಿ ಈ ಬಾರಿ ಬೆಳೆದ ಚೆಂಡು ಹೂ ಬೆಳೆ ರೈತರ ಕೈ ಹಿಡಿಯುತ್ತಿದೆ. ಕಣಿವೆ ಸಮೀಪದ ಹುಲುಸೆ ಗ್ರಾಮದ ಕೃಷಿಕ ದಂಪತಿಗಳಾದ ನಾಗಪ್ಪ ಹಾಗೂ ವಿಜಯ ಎಂಬವರು ಬೆಳೆದ ಚೆಂಡು ಹೂ ಬೆಳೆ ಮನದಲ್ಲಿ ಸಂತಸದ ಕಳೆ ಮೂಡಿಸಿದೆ. ಕೂಡಿಗೆಯಿಂದ ಹೆಬ್ಬಾಲೆ ಮಾರ್ಗದ ಹುಲುಸೆ ಬಳಿ ಒಂದು ಎಕರೆ ಭೂಮಿಯಲ್ಲಿ ಬೆಳೆದಿರುವ ಚೆಂಡು ಹೂ ಬೆಳೆ ಉತ್ತಮ ವಾದ ಫಸಲು ಬಿಟ್ಟಿದೆ. ಕೃಷಿಕ ನಾಗಪ್ಪ ದಂಪತಿಗಳೇ ಹೇಳುವಂತೆ ಒಂದು ಎಕರೆ ಭೂಮಿಯಲ್ಲಿ ಹಾಸನದ ಒಮಿನಿ ಎಂಬ ಸಂಸ್ಥೆಯವರು ಕೊಟ್ಟ ಚೆಂಡು ಹೂ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ರಾಸಾಯನಿಕ ಔಷÀಧಿಗಳನ್ನು ಬಳಸಿಕೊಂಡು ಶ್ರಮವ್ಯಯಿಸಿ ಬೆಳೆದಿರುವ ಚೆಂಡು ಹೂ ಬಳ್ಳಿಗಳಲ್ಲಿ ಸೊಗಸಾಗಿ ಅರಳಿದ್ದು ರಸ್ತೆ ಹೋಕರನ್ನು ಆಕರ್ಷಿಸುತ್ತಿದೆ. ಮಾತ್ರವಲ್ಲ. ಸುತ್ತಲೂ ಹಸಿರುಡುಗೆ ತೊಟ್ಟು ನಳನಳಿಸುತ್ತಿರುವ ನಿಸರ್ಗ ದೇವಿಯ ಮಡಿಲಲ್ಲಿ ಕಾಣುವ ಈ ಚೆಂಡು ಹೂ ತೋಟ, ನಾ ನೀಡುವ ಪರಿಮಳವನ್ನು ಬಾ ಆಸ್ವಾದಿಸು ಕಣ್ಣಿಗೆ ಮತ್ತು ಮನಕ್ಕೆ ಇಂಪು ಮಾಡಿಕೊಂಡು ಮುಂದೆ ಸಾಗು ಎಂದು ಹೇಳಿದಂತಿದೆ ಹೆದ್ದಾರಿಯಲ್ಲಿ ಹೋಗುವಾಗ ಕಾಣುವ ಆ ಸುಂದರ ನೋಟ. ಒಂದು ಎಕರೆ ವಿಸ್ತೀರ್ಣದ ಈ ಭೂಮಿಯಲ್ಲಿ 6800 ಬಳ್ಳಿಗಳನ್ನು ಬಿತ್ತನೆ ಮಾಡಲಾಗಿದೆ. ಎರಡೂವರೆ ತಿಂಗಳಿಂದ ಮೂರು ತಿಂಗಳ ಒಳಗೆ ಕೈಗೆ ಸಿಗುವ ಈ ಫಸಲನ್ನು ಈಗಾಗಲೇ ಮೊದಲ ಬಾರಿ ಕಟಾವು ಮಾಡಲಾಗಿದ್ದು ಮೊದಲ ಹಂತದಲ್ಲಿ 3 ಸಾವಿರ ಕೆ.ಜಿ. ಹೂ ಬಂದಿದೆ. ನಂತರ ಒಂದು ವಾರದ ಬಳಿಕ ಕೊಯ್ಲು ಮಾಡುವ ಎರಡನೇ ಹಂತದ ಕಟಾವಿಗೆ 5 ರಿಂದ 6 ಸಾವಿರ ಕೆ.ಜಿ. ಹೂವು ಲಭಿಸುತ್ತದೆ. ಒಂದು ಎಕರೆ ಭೂಮಿಯೊಳಗೆ ಬೆಳೆದಿರುವ ಚೆಂಡು ಹೂವು ಫಸಲು ಕನಿಷ್ಟ 50 ಸಾವಿರ ಕೆ.ಜಿ.ಯಿಂದ ಗರಿಷ್ಠ 70 ಸಾವಿರ ಕೆ.ಜಿ. ತೂಕ ಬರುವ ನಿರೀಕ್ಷೆ ಇದೆ. ಒಂದು ಎಕರೆ ಭೂಮಿಯಲ್ಲಿ ಬೆಳೆವ ಚೆಂಡು ಹೂವಿನ ಬೆಳೆಗೆ 10 ರಿಂದ 12 ಸಾವಿರ ರೂ. ಖರ್ಚು ತಗಲುತ್ತದೆ. ಇನ್ನುಳಿದ 30 ರಿಂದ 35 ಸಾವಿರ ರೂ. ಎರಡೂವರೆಯಿಂದ ಮೂರು ತಿಂಗಳ ಅವಧಿಯಲ್ಲಿ ನಮಗೆ ಸಿಗುವ ಆದಾಯವಾಗುತ್ತದೆ. ಈ ಬಾರಿ ಬಂದ ಚೆಂಡು ಹೂವು ಫಸಲು, ಹಾಗೂ ಮಾರುಕಟ್ಟೆಯಲ್ಲಿ ಈಗ ಇರುವ ಕೆ.ಜಿ.ಗೆ 7 ರೂ. ಬೆಲೆ ನಮಗೆ ಸಂತಸ ತಂದಿದೆ ಎನ್ನುತ್ತಾರೆ ನಾಗಪ್ಪ ವಿಜಯ ದಂಪತಿ.

ಸ್ಥಳೀಯವಾಗಿಯೂ ಸಾಕಷ್ಟು ಮಂದಿ ನಮ್ಮಲ್ಲಿ ಬಂದು ಚೆಂಡು ಹೂವನ್ನು ಕೆ.ಜಿ.ಗೆ 20 ರೂ.ಗಳಿಗೆ ಮಾರಾಟಕ್ಕೆ ಕೇಳುತ್ತಾರೆ. ಹೀಗೆಯೇ ಸ್ಥಳೀಯವಾಗಿ ಮಾರಾಟ ಮಾಡಿಕೊಂಡರೆ ನಮಗೆ ಇನ್ನೂ ದುಪ್ಪಟ್ಟು ಆದಾಯ ಲಭಿಸುತ್ತದೆ. ಆದರೆ ಹಾಸನದ ಬಣ್ಣದ ಕಂಪೆನಿಯವರ ಜೊತೆ ನಂಬುಗೆಯಿಂದ ಮಾಡಿಕೊಳ್ಳುವ ಮಾತುಕತೆಯ ಮೂಲಕದ ಒಪ್ಪಂದವಿರುವುದರಿಂದ ನಾವು ಕಂಪೆನಿಯವರಿಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಬೆಳೆಗಾರ ನಾಗಪ್ಪ. ಈ ಬಾರಿ ಮಳೆಯೂ ಕೂಡ ಅಧಿಕವಾಗಿ ಸುರಿಯದಿರುವುದು ನಮ್ಮ ಈ ಹೂ ಕೃಷಿಗೆ ಪೂರಕವಾಗಿದೆ. ಮಳೆಯಾದರೆ ಹೂವುಗಳ ಎಸಳುಗಳ ತುಂಬೆಲ್ಲಾ ನೀರು ತುಂಬಿಕೊಂಡು ಬಳ್ಳಿಗಳು ಬಾಗುತ್ತವೆ. ಆವಾಗ ನಮಗೆ ಹೂ ಕಟಾವು ಮಾಡಲು ಆಗಲ್ಲ. ಜೊತೆಗೆ ಜಾಸ್ತಿ ಮಳೆಯ ನೀರು ಹೂಗಳ ಬಣ್ಣವನ್ನು ಬದಲಿಸಿಬಿಡುತ್ತದೆ. ಅಂದರೆ ಕರಗಿ ಬಿಡುತ್ತದೆ ಎನ್ನುತ್ತಾರೆ ಈ ನಾಗಪ್ಪ. ಹಳ್ಳಿಗಾಡಿನ ರೈತರು ಯಾರೋ ಒಬ್ಬ ರೈತ ಏನಾದರೂ ಬೆಳೆದು ಒಂದಷ್ಟು ಲಾಭಗಳಿಸಿದರೆ ಮತ್ತೆ ಮರು ವರ್ಷ ಅಂತಹುದನ್ನೇ ವ್ಯಾಪಕವಾಗಿ ಬೆಳೆದು ದರ ಕುಸಿತಕ್ಕೆ ಕಾರಣವಾಗುವ ಬದಲು ಬಣ್ಣದ ಕಂಪೆನಿಯವರು ನೀಡುವ ಪೆÇ್ರೀತ್ಸಾಹವನ್ನು ಪಡೆದುಕೊಂಡು ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡು ಅಲ್ಪಾವಧಿಯಲ್ಲಿ ಅಧಿಕ ಲಾಭಗಳಿಸುವಂತಹ ಇಂತಹ ಕೃಷಿಯನ್ನು ಮಾಡಿದರೆ ಒಳಿತು ಎನ್ನುತ್ತಾರೆ ಈ ರೈತ ಮಹಿಳೆ ವಿಜಯನಾಗಪ್ಪ. ಕಡಿಮೆ ಖರ್ಚಿನಲ್ಲಿ ಚೆಂಡು ಹೂವು ಬೆಳೆದು ಲಾಭಗಳಿಸುವ ಅಪೇಕ್ಷೆ ಉಳ್ಳವರು ಈ ರೈತರನ್ನು ಸಂಪರ್ಕಿಸಿ ಅವರ ಕ್ರಮವನ್ನು ಅನುಸರಿಸ ಬಹುದಾ ಎನ್ನುವದನ್ನು ಒಮ್ಮೆ ಪ್ರಯತ್ನಿಸಬಹುದು.

ಸಂಪರ್ಕ ಸಂಖ್ಯೆ ಹುಲುಸೆ ನಾಗಪ್ಪ, 94834-32524.

ವಿಶೇಷ ವರದಿ: ಕೆ. ಎಸ್. ಮೂರ್ತಿ

ಕುಶಾಲನಗರ.