ಸೋಮವಾರಪೇಟೆ, ಜೂ. 24: ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಬೇಕಾದ ಹಿನ್ನೆಲೆ, ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಮುಂದಿನ ಜುಲೈ 4ರವರೆಗೆ ಸೋಮವಾರಪೇಟೆಯ ಎಲ್ಲಾ ಸೆಲೂನ್‍ಗಳನ್ನು ಸೀಲ್‍ಡೌನ್ ಮಾಡಲು ಸವಿತಾ ಸಮಾಜ ನಿರ್ಧರಿಸಿದೆ.

ಗ್ರಾಹಕರು ಹಾಗೂ ಸಂಘದ ಸದಸ್ಯರ ಹಿತ ಕಾಪಾಡುವ ದೃಷ್ಟಿಯಿಂದ ಸವಿತಾ ಸಮಾಜ ಈ ನಿರ್ಧಾರಕ್ಕೆ ಬಂದಿದ್ದು, ಇಲ್ಲಿನ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಒಮ್ಮತ್ತದ ತೀರ್ಮಾನ ಕೈಗೊಳ್ಳಲಾಗಿದೆ.

ಅದರಂತೆ ಇಂದಿನಿಂದಲೇ ಪಟ್ಟಣ ಸೇರಿದಂತೆ ಸೋಮವಾರ ಪೇಟೆ ಸವಿತಾ ಸಮಾಜಕ್ಕೆ ಒಳಪಡುವ ಸುತ್ತಮುತ್ತಲ ಹೇರ್‍ಕಟ್ಟಿಂಗ್ ಸೆಲೂನ್ ಗಳನ್ನು ಬಂದ್ ಮಾಡಲಾಗಿದ್ದು, ಅಂಗಡಿಗಳ ಎದುರು ‘ಜುಲೈ 4ರವರೆಗೆ ಅಂಗಡಿ ಬಂದ್’ ಎಂದು ಫಲಕ ಅಳವಡಿಸಲಾಗಿದೆ.

ಸೆಲೂನ್ ಅಂಗಡಿಗಳಲ್ಲಿ ಕೆಲಸ ಮಾಡುವವರು ಗ್ರಾಹಕರೊಂದಿಗೆ ನಿಕಟ ಸಂಪರ್ಕ ಹೊಂದಬೇಕಾದ ಅಗತ್ಯತೆಯಿದೆ. ಈಗಾಗಲೇ ಕೊರೊನಾ ಸೋಂಕು ತಗುಲಿರುವ ವ್ಯಕ್ತಿ ಸೋಮವಾರಪೇಟೆಯ ಆರ್‍ಎಂಸಿ ಮಾರ್ಕೆಟ್, ಕರ್ಕಳ್ಳಿಯ ಮನೆಗಳಿಗೆ ಭೇಟಿ ನೀಡಿರುವ ಇತಿಹಾಸವಿದ್ದು, ಸಾರ್ವಜನಿಕ ವಲಯದಲ್ಲೂ ಆತಂಕ ಮನೆ ಮಾಡಿದೆ. ಈ ಹಿನ್ನೆಲೆ ಸೆಲೂನ್‍ಗಳನ್ನು ಬಂದ್ ಮಾಡುವದೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು. ಇದರೊಂದಿಗೆ ಸೋಮವಾರ ಪೇಟೆ ಸವಿತಾ ಸಮಾಜದ ವ್ಯಾಪ್ತಿಗೆ ಒಳಪಡುವ ಐಗೂರು, ಅಬ್ಬೂರುಕಟ್ಟೆ, ಬಾಣಾವರ, ಕಾಗಡಿಕಟ್ಟೆ ವ್ಯಾಪ್ತಿಯ ಅಂಗಡಿಗಳನ್ನೂ ಮುಂದಿನ 10 ದಿನಗಳವರೆಗೆ ಬಂದ್ ಮಾಡಲು ತೀರ್ಮಾನಿಸಲಾಯಿತು.

ಸವಿತಾ ಸಮಾಜದ ಅಧ್ಯಕ್ಷ ಎ.ವಿ. ಶಂಕರ್, ಉಪಾಧ್ಯಕ್ಷ ಎಸ್. ರಮೇಶ್, ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ಸುದೀಪ್ ಸೇರಿದಂತೆ ಪದಾಧಿಕಾರಿಗ ಳಾದ ನಾರಾಯಣ, ಆನಂದ್, ಮಹೇಶ್, ರಾಮಚಂದ್ರ, ಮಂಜುನಾಥ್, ಡಿ.ಎನ್. ಆನಂದ್, ನಾಗರಾಜು, ಲಿಂಗರಾಜು, ಧರ್ಮ, ಶ್ರೀಕಂಠ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.