ಮಡಿಕೇರಿ, ಜೂ. 24: ಜಿಲ್ಲಾಡಳಿತದ ನಿರ್ದೇಶನದಂತೆ ಹೊರಗಿನಿಂದ ತವರಿಗೆ ಬಂದು, 14 ದಿನಗಳ ಗೃಹ ಸಂಪರ್ಕ ತಡೆಗೆ ಒಳಪಡಿಸಲಾಗಿದ್ದ ಇಬ್ಬರು ವ್ಯಕ್ತಿಗಳನ್ನು ಸಾಂಸ್ಥಿಕ ಗೃಹ ಸಂಪರ್ಕ ತಡೆಗೆ ಒಳಪಡಿಸಿದ ಪ್ರಸಂಗ ನಡೆದಿದೆ.

ವೀರಾಜಪೇಟೆಯಲ್ಲಿ ಇಬ್ಬರಿಗೆ ಗೃಹ ಸಂಪರ್ಕ ತಡೆಗೆ ಸೂಚಿಸಿದ್ದರೂ, ನಿಯಮ ಉಲ್ಲಂಘಿಸಿ ಪಟ್ಟಣದಲ್ಲಿ ಸುಳಿದಾಡುತ್ತಿದ್ದ ಬಗ್ಗೆ ಅಧಿಕೃತ ಮಾಹಿತಿ ಮೇರೆಗೆ ಕ್ರಮ ಜರುಗಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ನಂದೀಶ್ ಖಚಿತಪಡಿಸಿದ್ದಾರೆ. ಸಾರ್ವಜನಿಕರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದ್ದು, ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಮುಖಗವುಸು ಧರಿಸದೆ, ವಿನಾಃಕಾರಣ ಓಡಾಡುವದು ಕಂಡು ಬಂದರೆ ಅಂಥವರ ವಿರುದ್ಧವೂ ಕ್ರಮ ಜರುಗಿಸುವದರೊಂದಿಗೆ ದಂಡ ವಿಧಿಸಲಾಗುವುದು ಎಂದು ತಹಶೀಲ್ದಾರ್ ಎಚ್ಚರಿಸಿದ್ದಾರೆ.

ದುಬೈ ವ್ಯಕ್ತಿಗೆ ಕ್ವಾರಂಟೈನ್: ಈ ನಡುವೆ ದುಬೈನಿಂದ 14 ದಿನಗಳ ಸಾಂಸ್ಥಿಕ ಸಂಪರ್ಕ ತಡೆ ಮೇರೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ರೀತಿ ಹೊರಗಿನಿಂದ ಬರುವವರು ಸ್ವಯಂ ಪ್ರೇರಿತರಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಕೊರೊನಾ ಹರಡದಂತೆ ಸಹಕರಿಸಬೇಕೆಂದು ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಅವರು ಸಲಹೆ ನೀಡಿದ್ದಾರೆ. ಅಲ್ಲದೆ ಸರಕಾರದೊಂದಿಗೆ ಜಿಲ್ಲಾಡಳಿತದ ನಿಯಮ ಪಾಲಿಸದಿದ್ದರೆ ಅಂಥವರ ವಿರುದ್ಧ ಮಾಹಿತಿ ಲಭಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.