ಎಲ್‍ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ

ಲಡಾಖ್, ಜೂ. 24: ಗಲ್ವಾನ್ ಕಣಿವೆ ಘರ್ಷಣೆಯ ನಂತರವೂ ಉದ್ಧಟತನ ಬಿಡದ ಚೀನಾ ಮಾತುಕತೆ ನಡುವೆಯೇ ಎಲ್‍ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ, ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದೆ. ಫಿಂಗರ್ ಏರಿಯಾವೂ ಸೇರಿದಂತೆ ನಿರ್ಣಾಯಕ ಪ್ರದೇಶಗಳಲ್ಲಿ ಚೀನಾ ಹೆಚ್ಚು ಪ್ರದೇಶದೊಂದಿಗೆ ಹಾಗೂ ಹೆಚ್ಚು ನಿರ್ಮಾಣ ಕಾಮಗಾರಿ, ಸೇನಾ ನಿಯೋಜನೆ ಮಾಡುತ್ತಿದೆ. ಮೇ 4 ರಿಂದ ಈಶಾನ್ಯ ಲಡಾಖ್‍ನಲ್ಲಿ ಎಲ್‍ಎಸಿಯ ಉದ್ದಕ್ಕೂ 10,000 ಸೇನಾ ಸಿಬ್ಬಂದಿಗಳ ನಿಯೋಜನೆ, ಬೃಹತ್ ಶಸ್ತ್ರಾಸ್ತ್ರಗಳು, ಡಿಫೆನ್ಸ್ ಬ್ಯಾಟರಿಗಳನ್ನು ಸ್ಥಾಪನೆ ಮಾಡಿದೆ. ಪ್ಯಾಂಗಾಂಗ್ ತ್ಸೋ ನದಿಯ ಉದ್ದಕ್ಕೂ ಇರುವ ಫಿಂಗರ್ ಏರಿಯಾದ ಬಳಿ ಚೀನಾ ಸೇನಾ ಸಿಬ್ಬಂದಿಗಳ ನಿಯೋಜನೆ, ನಿರ್ಮಾಣ ಕಾಮಗಾರಿ ಸೇರಿದಂತೆ ತನ್ನ ಸೇನಾ ಚಟುವಟಿಕೆಗಳನ್ನು ಮುಂದುವರೆಸಿದೆ ಎಂದು ತಿಳಿದುಬಂದಿದೆ. ಭಾರತ ಫಿಂಗರ್ 8 ವರೆಗೂ ತನ್ನ ಹಕ್ಕು ಪ್ರತಿಪಾದನೆ ಮಾಡುತ್ತಿದೆ.

ವಿಧಾನಸೌಧಕ್ಕೆ ಸಾರ್ವಜನಿಕ ಪ್ರವೇಶವಿಲ್ಲ

ಬೆಂಗಳೂರು, ಜೂ. 24: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹ ಕಟ್ಟಡಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಚಿವಾಲಯದ ಕಟ್ಟಡಗಳಲ್ಲಿ ನೋವೆಲ್ ಕೊರೊನಾ ವೈರಸ್ (ಕೋವಿಡ್-19) ಸೋಂಕು ಹರಡುತ್ತಿರುವುದರಿಂದ ಪ್ರತಿಯೊಂದು ಹಂತದಲ್ಲಿಯೂ ಸಹ ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ಸಚಿವಾಲಯದ ಅಧಿಕಾರಿ ಸಿಬ್ಬಂದಿ ಸಾರ್ವಜನಿಕರ ಆರೋಗ್ಯ ಹಾಗೂ ಆಡಳಿತದ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಚಿವರು ಅಧಿಕಾರಿಗಳನ್ನು ಭೇಟಿ ಮಾಡಲು ಸಂದರ್ಶಿಸಲು ನಿರ್ದಿಷ್ಟ ಉದ್ದೇಶವನ್ನು ಹೊಂದಿರುವ ಸಾರ್ವಜನಿಕರನ್ನು ಮಾತ್ರ ಪರಿಶೀಲಿಸಿ ಮಧ್ಯಾಹ್ನ 3.30 ರ ನಂತರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ

ಬೆಂಗಳೂರು, ಜೂ. 24: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ನಾಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರು ನಗರದ ವಿವಿಧ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ನಾಳೆಯಿಂದ ನಡೆಯಲಿರುವ ಪರೀಕ್ಷಾ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿ ಸುರೇಶ್ ಕುಮಾರ್, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಕ್ರಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಿದ್ದು, ಯಾವುದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ ಅವರ ಹಿತದೃಷ್ಟಿಯಿಂದ ಕೈಗೊಂಡಿರುವ ಸರ್ಕಾರದ ಕ್ರಮವನ್ನು ಪ್ರೋತ್ಸಾಹಿಸಬೇಕು ಎಂದರು. ಹೆಬ್ಬಾಳದ ಸರ್ಕಾರಿ ಪ್ರೌಢ ಶಾಲೆ, ಮಲ್ಲೇಶ್ವರಂನ ವೈಯಾಲಿಕಾವಲ್ ಸೊಸೈಟಿ ಶಾಲೆ, ಸ್ಟೆಲ್ಲಾ ಮಾರಿಸ್ ಶಾಲೆ, ನಿರ್ಮಲರಾಣಿ ಪ್ರೌಢ ಶಾಲೆ, ಜಯನಗರದ ಆರ್.ವಿ. ಪ್ರೌಢಶಾಲೆ, ವಿಜಯ ಪ್ರೌಢಶಾಲೆ, ಸಾರಕ್ಕಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಸಚಿವರು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸಿರುವ ಕ್ರಮಗಳು, ಆರೋಗ್ಯಕರ ವಾತಾವರಣ, ಮಕ್ಕಳ ಸುರಕ್ಷೆ, ಆರೋಗ್ಯ ತಪಾಸಣೆ, ಸೇರಿದಂತೆ ಪರೀಕ್ಷೆ ನಡೆಸುವ ಕುರಿತು ಎಲ್ಲ ಇಲಾಖೆಗಳ ಸಮನ್ವಯದಲ್ಲಿ ಕೈಗೊಳ್ಳಲಾಗಿರುವ ಸಿದ್ಧತಾ ಕ್ರಮಗಳನ್ನು ಅವಲೋಕಿಸಿ ತೃಪ್ತಿ ವ್ಯಕ್ತಪಡಿಸಿದರು.

ಐಸಿಎಸ್‍ಇ ಪರೀಕ್ಷೆಗೆ ಅವಕಾಶವಿಲ್ಲ

ಮುಂಬೈ, ಜೂ. 24: ಬಾಕಿ ಉಳಿದಿರುವ ಐಸಿಎಸ್‍ಇ 10ನೇ ಮತ್ತು 12 ತರಗತಿಗಳ ಪರೀಕ್ಷೆಗೆ ರಾಜ್ಯದಲ್ಲಿ ಅನುಮತಿ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಜುಲೈನಲ್ಲಿ ನಿಗದಿಯಾಗಿರುವ ಐಸಿಎಸ್‍ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮಹಾ ಸರ್ಕಾರ ಕೋರ್ಟ್‍ಗೆ ಸ್ಪಷ್ಟಪಡಿಸಿದೆ. ಇದೇ ವೇಳೆ, ಕೊರೊನಾ ವೈರಸ್ ಹಿನ್ನೆಲೆ ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ಸಹ ನಡೆಸದಿರಲು ಸರ್ಕಾರ ನಿರ್ಧರಿಸಿದೆ ಎಂದು ಕೋರ್ಟ್‍ಗೆ ತಿಳಿಸಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾತ್ರೆ ನೇತೃತ್ವದಲ್ಲಿ ಮಂಗಳವಾರ ನಡೆದ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಐಸಿಎಸ್‍ಇ ಪರೀಕ್ಷೆಗೆ ಅನುಮತಿ ನೀಡದಿರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳ ಲಾಗಿದೆ ಎಂದು ಅಡ್ವೊಕೇಟ್ ಜನರಲ್ ಆಶುತೋಷ್ ಕುಂಭಕೋನಿ ಅವರು ಕೋರ್ಟ್‍ಗೆ ತಿಳಿಸಿದ್ದಾರೆ.

ಗುಣಮುಖರಾದವರಿಗೆ ಪರೀಕ್ಷೆ ಇಲ್ಲ

ಬೆಂಗಳೂರು, ಜೂ. 24: ಇನ್ನು ಮುಂದೆ ಕೋವಿಡ್ ರೋಗ ಲಕ್ಷಣಗಳಿಲ್ಲದ ಮತ್ತು ಆರಂಭಿಕ ಹಂತದ ಲಕ್ಷಣಗಳನ್ನು ಹೊಂದಿದವರು ಗುಣಮುಖರಾದ ನಂತರ ಮತ್ತೊಮ್ಮೆ ಕೋವಿಡ್-19 ಪರೀಕ್ಷೆ ನಡೆಸದೆಯೇ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ. ಈ ಕುರಿತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದು, ಕೋವಿಡ್ ಲಕ್ಷಣಗಳಿಲ್ಲದ ರೋಗಿಗಳಿಗೆ ಗಂಟಲು ದ್ರವ ಸಂಗ್ರಹಿಸಿದ ದಿನಗಳಿಂದ ಹತ್ತು ದಿನಗಳವರೆಗೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ನಂತರ ಮನೆಗೆ ಕಳುಹಿಸಬಹುದು. ಈ ಸಂದರ್ಭದಲ್ಲಿ ದೇಹದ ಉಷ್ಣಾಂಶವನ್ನು ತಪಾಸಣೆ ನಡೆಸಿದರೆ ಸಾಕು. ಆದರೆ, ಮನೆಗೆ ತೆರಳಿದ ಬಳಿಕ 14 ದಿನಗಳು ಕಡ್ಡಾಯವಾಗಿ ಮನೆ ಕ್ವಾರಂಟೈನ್‍ಗೆ ಒಳಗಾಗಬೇಕು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.

ಪೊಲೀಸ್ ಕುಟುಂಬಕ್ಕೆ ರೂ. 30 ಲಕ್ಷ ಪರಿಹಾರ

ಬೆಂಗಳೂರು, ಜೂ. 24: ಕೋವಿಡ್-19ನಿಂದ ಮೃತಪಟ್ಟ ಮೂವರು ಪೊಲೀಸರ ಕುಟುಂಬಕ್ಕೆ ರೂ. 30 ಲಕ್ಷ ಪರಿಹಾರ ಘೋಷಣೆಯಾಗಿದ್ದು, ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಇತ್ತೀಚೆಗೆ ಪೊಲೀಸ್‍ರಲ್ಲಿ ಕೊರೊನಾ ಸೋಂಕು ಹೆಚ್ಚಳಗೊಂಡಿರುವ ಹಿನ್ನೆಲೆ ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಪ್ರಮುಖ ಜವಾಬ್ದಾರಿ ಹೊಂದಿದ್ದು, ಕೋವಿಡ್ ಸಾವು, ಕಂಟೈನ್‍ಮೆಂಟ್ ಪ್ರದೇಶ ನಿಯಂತ್ರಣ ಮಾಡುವುದರ ಜೊತೆಗೆ ಜನರ ರಕ್ಷಣೆ ಮಾಡುವ ಹೊಣೆಯೂ ಅವರ ಮೇಲಿದೆ. ಆದ್ದರಿಂದ ನಮ್ಮ ಸಿಬ್ಬಂದಿಯಲ್ಲಿ ಅಧಿಕ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದರು. ಬೆಂಗಳೂರಿನಲ್ಲಿ ಪೊಲೀಸರಿಗಾಗಿಯೇ ಪ್ರತ್ಯೇಕ ಚಿಕಿತ್ಸೆ ನೀಡಲು ಐದು ಕೋವಿಡ್-19 ಆಸ್ಪತ್ರೆ ಗುರುತಿಸಲಾಗಿದೆ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರಕಬೇಕು. ಅಲ್ಲದೇ, ತಪಾಸಣೆ ತಡವಾಗಬಾರದು ಎಂಬ ಉದ್ದೇಶದಿಂದ ಪೊಲೀಸರಿಗೆ ಹೆಚ್ಚು ತಪಾಸಣೆ ಸೆಂಟರ್ ಕೇಳಲಾಗಿದ್ದು, ಈ ಕುರಿತು ಎಸಿಎಸ್ ಅವರೊಂದಿಗೆ ಮಾತನಾಡಿದ್ದೇನೆ ಎಂದ ಅವರು ಪ್ರತ್ಯೇಕ ಆಸ್ಪತ್ರೆ, ಟೆಸ್ಟಿಂಗ್ ಘಟಕ ನೀಡಲಿದ್ದಾರೆ

ಕೇರಳ ಸಚಿವರಿಗೆ ವಿಶ್ವಸಂಸ್ಥೆ ಪುರಸ್ಕಾರ

ನವದೆಹಲಿ, ಜೂ. 24: ಮಾರಕ ಕೊರೊನಾ ವೈರಸ್ ಹರಡುವುದನ್ನು ಯಶಸ್ವಿಯಾಗಿ ನಿಯಂತ್ರಿಸಿ ಮಾದರಿಯಾದ ಕೇರಳ ರಾಜ್ಯ ಆರೋಗ್ಯ ಸಚಿವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆಯಂದು ಕೇರಳ ಆರೋಗ್ಯ ಸಚಿವ ಕೆ.ಕೆ. ಶೈಲಜಾ ಅವರನ್ನು ವಿಶ್ವಸಂಸ್ಥೆ ವಿಶೇಷವಾಗಿ ಪುರಸ್ಕರಿಸಿದೆ. ವರ್ಚುವಲ್ ಪ್ಲಾಟ್‍ಫಾರ್ಮ್‍ನಲ್ಲಿ ನಡೆದ ಈ ಸಮಾರಂಭದಲ್ಲಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಮತ್ತು ಇತರರು ಭಾಗವಹಿಸಿದ್ದರು. ಆ ವೇಳೆ ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕಾಗಿ ಶೈಲಾಜಾ ಅವರನ್ನು ಶ್ಲಾಘಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಶೈಲಜಾ ಕೇರಳ ಈ ಹಿಂದೆ ಎದುರಿಸಿದ್ದ ನಿಪಾ ವೈರಸ್, ಎರಡು ಭೀಕರ ಪ್ರವಾಹದ ಸ್ಥಿತಿಯು ಇಂದು ಕೋವಿಡ್ ವಿಚಾರದಲ್ಲಿ ರಾಜ್ಯ ಆರೋಗ್ಯ ಕ್ಷೇತ್ರವು ನಿರ್ಣಾಯಕ ಪಾತ್ರ ವಹಿಸಲು ಸಹಾಯ ಮಾಡಿದೆ. ಚೀನಾದ ವುಹಾನ್‍ನಲ್ಲಿ ಕೊರೊನಾ ಪ್ರಕರಣ ವರದಿಯಾಗುತ್ತಿದ್ದಂತೆಯೇ ಕೇರಳ ಡಬ್ಲ್ಯುಹೆಚ್‍ಒನ ಜಾಡು ಹಿಡಿಯಿತು ಮತ್ತು ಪ್ರತಿ ಆಪರೇಟಿಂಗ್ ಪ್ರೋಟೋಕಾಲ್‍ಗಳು ಮತ್ತು ಅಂತರರಾಷ್ಟ್ರೀಯ ರೂಪುರೇಷೆಗಳನ್ನು ಫಾಲೋ ಮಾಡಲು ಪ್ರಾರಂಭಿಸಿತು. ಇದರಿಂದಾಗಿ ಮಾರಕ ಕೊರೊನಾ ಸಂಪರ್ಕ ಹರಡುವುದನ್ನು ಶೇ. 12.5 ಕ್ಕಿಂತ ಕಡಿಮೆ ಮಾಡಲು ಹಾಗೂ ಮರಣ ಪ್ರಮಾಣವನ್ನು ಶೇ. 0.6ಕ್ಕೆ ಕುಗ್ಗಿಸಲು ಸಾಧ್ಯವಾಯಿತು ಎಂದಿದ್ದಾರೆ.