ಕುಶಾಲನಗರ, ಜೂ. 24: ಎಟಿಎಂ ಕೇಂದ್ರದಲ್ಲಿ ವೃದ್ಧರೊಬ್ಬರಿಗೆ ಸಹಾಯ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬ ಸಾವಿರಾರು ರೂ. ಹಣ ಲಪಟಾಯಿಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ಸಿದ್ದಯ್ಯ ಲೇಔಟ್ ನಿವಾಸಿ ನಿವೃತ್ತ ನೌಕರರಾದ ಡಿ.ಆರ್. ಪೂಣಚ್ಚ ಎಂಬವರು ಕುಶಾಲನಗರ ಬಿ.ಎಂ. ರಸ್ತೆಯಲ್ಲಿರುವ ಎಸ್‍ಬಿಐ ಶಾಖೆಯ ಬಳಿ ಇರುವ ಎಟಿಎಂಗೆ ತೆರಳಿ ಮೂರು ಸಾವಿರ ಹಣ ಡ್ರಾ ಮಾಡಿದ್ದಾರೆ. ಬಳಿಕ ಅವರ ಪಕ್ಕದಲ್ಲಿದ್ದ ಅಪರಿಚಿತ ಯುವಕನಿಗೆ ಬ್ಯಾಲೆನ್ಸ್ ಚೆಕ್ ಮಾಡಲು ಸಹಾಯ ಕೋರಿದ್ದಾರೆ. ಆ ಸಂದರ್ಭ ತನ್ನ ಚಾಣಾಕ್ಷತನ ತೋರಿದ ಯುವಕ ತನ್ನ ಬಳಿಯಿದ್ದ ಎಟಿಎಂ ಕಾರ್ಡ್ ಅನ್ನು ಪೂಣಚ್ಚರವರ ಕೈಗೆ ನೀಡಿ ಪೂಣಚ್ಚರವರ ಎಟಿಎಂ ಕಾರ್ಡ್ ತನ್ನ ಜೇಬಿಗಿರಿಸಿ ಅಲ್ಲಿಂದ ತೆರಳುವಲ್ಲಿ ಯಶಸ್ವಿಯಾಗಿದ್ದಾನೆ.
ಮರುದಿನ ಪೂಣಚ್ಚರವರ ಮೊಬೈಲ್‍ಗೆ ಸಂದೇಶ ಬಂದಿರುವುದನ್ನು ಅವರ ಮಗ ಗಮನಿಸಿದಾಗ ಎರಡು ಬಾರಿ ಬ್ಯಾಂಕ್ ಖಾತೆಯಿಂದ ಹಣ ಪಡೆದಿರುವ ಬಗ್ಗೆ ಮಾಹಿತಿ ದೊರಕಿದೆ. ಒಂದು ಬಾರಿ 17,000 ಮತ್ತು ಎರಡನೇ ಬಾರಿ 20,000 ಒಟ್ಟು ರೂ. 37000 ಹಣ ಎಟಿಎಂ ಮೂಲಕ ಡ್ರಾ ಮಾಡಿರುವ ಮೆಸೇಜ್ ಬಂದಿದ್ದು ಅನುಮಾನ ಬಂದ ಪೂಣಚ್ಚರವರ ಕೈಯಲ್ಲಿರುವ ಎಟಿಎಂ ಕಾರ್ಡ್ ಪರಿಶೀಲಿಸಿದಾಗ ಕಾರ್ಡ್ ಬದಲಾವಣೆಯಾಗಿರುವುದು ಖಚಿತಗೊಂಡಿದೆ. ಪೂಣಚ್ಚ ಈ ಬಗ್ಗೆ ಕುಶಾಲನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.