ಸಿದ್ದಾಪುರ, ಜೂ. 23: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂದೂಡಲ್ಪಟ್ಟ ಹತ್ತನೇ ತರಗತಿ ಪರೀಕ್ಷೆಗಳನ್ನು ತಾ. 25 ರಿಂದ ನಡೆಯುವ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲಾ ಕೇಂದ್ರದಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನೆಲ್ಯಹುದಿಕೇರಿ ಗ್ರಾ.ಪಂ ಪಿ.ಡಿ.ಓ ಅನಿಲ್ ಕುಮಾರ್ ನೇತೃತ್ವದಲ್ಲಿ ಪರೀಕ್ಷೆಗಳು ನಡೆಯುವ ಕೊಠಡಿಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಕೊಠಡಿಗಳನ್ನು ಶುಚಿತ್ವಗೊಳಿಸಲಾಯಿತು.

ಈ ಕುರಿತು ಮಾಹಿತಿ ನೀಡಿದ ಪಿ.ಡಿ.ಓ ಅನಿಲ್ ಕುಮಾರ್ ಇತ್ತೀಚೆಗೆ ನಡೆದ ಪಿ.ಯು.ಸಿ ಪರೀಕ್ಷೆ ಸಂದರ್ಭದಲ್ಲಿ ಕೂಡ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸ್ಯಾನಿಟೈಸರ್ ಸಿಂಪಡಿಸಿ ಶುಚಿತ್ವಗೊಳಿಸಲಾಗಿತ್ತು. ಈಗಾಗಲೇ ಗ್ರಾ.ಪಂ ವ್ಯಾಪ್ತಿಯಲ್ಲಿ ಕೋವಿಡ್ 19 ತಂಡವನ್ನು ರಚನೆ ಮಾಡಿ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಹೊರ ರಾಜ್ಯದಿಂದ ಹಾಗೂ ಹೊರ ಜಿಲ್ಲೆಯಿಂದ ಬರುವ ಪ್ರತಿಯೊಬ್ಬರ ಮಾಹಿತಿಯನ್ನು ಕೊರೊನಾ ವಾರಿಯರ್ಸ್ ತಂಡ ಕಲೆ ಹಾಕುತ್ತಿದೆ. ಕಳೆದೆರಡು ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿ ಹಾಗೂ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.